ವಿದ್ಯಾರ್ಥಿಗಳೇ ಗುರಿ ಇರಿಸಿಕೊಂಡು ಸಾಧನೆ ಮಾಡಿ: ಸಿ.ಎನ್. ಮಂಜೇಗೌಡ ಕರೆ

| Published : May 27 2024, 01:04 AM IST

ವಿದ್ಯಾರ್ಥಿಗಳೇ ಗುರಿ ಇರಿಸಿಕೊಂಡು ಸಾಧನೆ ಮಾಡಿ: ಸಿ.ಎನ್. ಮಂಜೇಗೌಡ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಓದಿದರೂ ಸಾಲದು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದೇಶ, ಭಾಷೆ, ನೆಲ, ಜಲದ ಬಗ್ಗೆ ಶಂಕರಾಚಾರ್ಯ, ಗಾಂಧೀಜಿ, ಅಂಬೇಡ್ಕರ್, ಬಸವಣ್ಣರಂತಹ ಮಹಾನೀಯರ ಬಗ್ಗೆಯೂ ಓದಿ ತಿಳಿದುಕೊಳ್ಳಬೇಕು. ಸಮಾಜಕ್ಕೆ ಆದರ್ಶವಾಗುವ ಪೀಳಿಗೆಯಾಗಬೇಕು. ತಂದೆ ತಾಯಿಯನ್ನು ಗೌರವಿಸುವ ಮನುಷ್ಯತ್ವಕ್ಕೆ ಬೆಲೆಕೊಡುವ ಮಕ್ಕಳು ನೀವಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮನುಷ್ಯನ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ. ಹೀಗಾಗಿ, ವಿದ್ಯಾರ್ಥಿಗಳು ಶ್ರಮವಹಿಸಿ ಛಲದಿಂದ ಗುರಿ ಇರಿಸಿಕೊಂಡು ಸಾಧನೆ ಮಾಡುವುದರೊಂದಿಗೆ ಶಂಕರಾಚಾರ್ಯರ ತತ್ತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.

ನಗರದ ಶೃಂಗೇರಿ ಶಂಕರ ಮಠದಲ್ಲಿ ಕರ್ನಾಟಕ ಸೇನಾ ಪಡೆಯು ಭಾನುವಾರ ಆಯೋಜಿಸಿದ್ದ ಶ್ರೀ ಶಂಕರ ಜಯಂತಿ- ತತ್ವಜ್ಞಾನಿಗಳ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಶ್ರೀ ಶಂಕರಾಚಾರ್ಯ ಸೇವಾರತ್ನ ಪ್ರಶಸ್ತಿ ಹಾಗೂ ಎಸ್ಎಸ್ಎಲ್ಸಿಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಅವರು ಅಭಿನಂದಿಸಿ ಮಾತನಾಡಿದರು.

ನಾನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿರಲಿಲ್ಲ. ನಾನು ಚಿಕ್ಕವನಿದ್ದಾಗ ನನಗೆ ಹಾಕಿಕೊಳ್ಳಲು ಬಟ್ಟೆಯೇ ಇರಲಿಲ್ಲ. ಇಂದು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಘಸಂಸ್ಥೆಗಳು ಪ್ರೋತ್ಸಹಿಸುತ್ತಿವೆ. ಜ್ಞಾನ ಯಾರ ಸ್ವತ್ತು ಅಲ್ಲ, ಪ್ರತಿಭೆ ಎಲ್ಲಾ ಮಕ್ಕಳಲ್ಲಿಯೂ ಇರುತ್ತದೆ ಎಂದು ಅವರು ಹೇಳಿದರು.

ಇಂದು ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಓದಿದರೂ ಸಾಲದು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದೇಶ, ಭಾಷೆ, ನೆಲ, ಜಲದ ಬಗ್ಗೆ ಶಂಕರಾಚಾರ್ಯ, ಗಾಂಧೀಜಿ, ಅಂಬೇಡ್ಕರ್, ಬಸವಣ್ಣರಂತಹ ಮಹಾನೀಯರ ಬಗ್ಗೆಯೂ ಓದಿ ತಿಳಿದುಕೊಳ್ಳಬೇಕು. ಸಮಾಜಕ್ಕೆ ಆದರ್ಶವಾಗುವ ಪೀಳಿಗೆಯಾಗಬೇಕು. ತಂದೆ ತಾಯಿಯನ್ನು ಗೌರವಿಸುವ ಮನುಷ್ಯತ್ವಕ್ಕೆ ಬೆಲೆಕೊಡುವ ಮಕ್ಕಳು ನೀವಾಗಬೇಕು. ಈ ಭೂಮಿಯ ಮೇಲೆ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವಂತಹ ಸಾಧನೆ ಮಾಡಬೇಕು ಎಂದ ಅವರು ಸಲಹೆ ನೀಡಿದರು.

ಇಂದು ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಯಾರಿಗೂ ಕಡಿಮೆ ಇಲ್ಲದಿರುವುದರಿಂದ ಈ ಸಮಾಜಕ್ಕೆ ಶಕ್ತಿಯಾಗಬೇಕು ಎಂದು ತಿಳಿಸಿದರು.

ಇದೇ ವೇಳೆ ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್ ವೈದ್ಯ ಡಾ. ಶುಶ್ರೂತ್ ಗೌಡ, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಸಿಟಿ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಎನ್. ಸ್ವರೂಪ್, ಪ್ರಸೂತಿ ಹಾಗೂ ಸ್ತೀರೋಗ ತಜ್ಞೆ ಡಾ.ಕೆ.ವಿ. ಲಕ್ಷ್ಮೀದೇವಿ, ಲೋಕೋಪಯೋಗಿ ಇಲಾಖೆಯ ಎಇಇ ಆರ್. ಆದರ್ಶ್, ಮೊದಲಾದವರಿಗೆ ಶ್ರೀ ಶಂಕರಾಚಾರ್ಯ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಸಾಹಿತಿ ಡಾ. ಲೀಲಾಪ್ರಕಾಶ್, ವಿಜಯವಿಠಲ ಕಾಲೇಜಿನ ಪ್ರಾಂಶುಪಾಲ ಸತ್ಯಪ್ರಸಾದ್, ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮೊದಲಾದವರು ಇದ್ದರು.