ಸಾರಾಂಶ
ಎಸ್.ಎಂ.ಸೈಯದ್ ಗಜೇಂದ್ರಗಡ
ಪ್ರಸ್ತುತ ದಿನಮಾನಗಳಲ್ಲಿ ಎಲ್ಲದಕಿಂತ ಮುಖ್ಯವಾದದ್ದು ಶಿಕ್ಷಣ. ಅಮೂಲ್ಯವಾದ ಶಿಕ್ಷಣವನ್ನು ಸಮರ್ಪಕವಾಗಿ ಒದಗಿಸುವುದು ಆಡಳಿತದ ಜವಾಬ್ದಾರಿ. ಆದರೆ ತಾಲೂಕಿನಲ್ಲಿ ನಾಲ್ಕು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರೇ ಆಸರೆಯಾದ ಪರಿಣಾಮ ಕಾಯಂ ಉಪನ್ಯಾಸಕರ ಸಮಸ್ಯೆಯಿಂದ ಕಾಲೇಜುಗಳು ಬಳಲುತ್ತಿವೆ.ಗಜೇಂದ್ರಗಡ, ನರೇಗಲ್ ಪಟ್ಟಣಗಳು ಸೇರಿದಂತೆ ಮುಶಿಗೇರಿ, ನಿಡಗುಂದಿ ಗ್ರಾಮಗಳಲ್ಲಿ ತಲಾ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಇದ್ದು ಗಜೇಂದ್ರಗಡ, ನರೇಗಲ್ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದರೆ, ನಿಡಗುಂದಿ ಕಾಲೇಜಿನಲ್ಲಿ ಕಲಾ, ವಾಣಿಜ್ಯ ವಿಭಾಗಗಳಿವೆ. ಆದರೆ ಮುಶಿಗೇರಿ ಕಾಲೇಜಿನಲ್ಲಿ ಕಲಾ ವಿಭಾಗ ಮಾತ್ರವಿದೆ. ಇತ್ತ ನರೇಗಲ್ ಹೊರತುಪಡಿಸಿ ಎಲ್ಲ ಕಾಲೇಜುಗಳಲ್ಲಿ ಪ್ರಭಾರಿ ಪ್ರಾಚಾರ್ಯರಿದ್ದು, ಅರ್ಧದಷ್ಟು ಉಪನ್ಯಾಸಕರು ಹಾಗೂ ಡಿ ಗ್ರುಪ್ ಮತ್ತು ಪ್ರಥಮ ದರ್ಜೆ ಸಹಾಯಕರ ಕೊರತೆ ಎದ್ದು ಕಾಣುತ್ತಿದೆ.
ಗಜೇಂದ್ರಗಡದ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು ೧೧ ಕಾಯಂ ಉಪನ್ಯಾಸಕರಿರಬೇಕು. ಆದರೆ ೬ ಉಪನ್ಯಾಸಕರು ಹಾಗೂ ೫ ಅತಿಥಿ ಉಪನ್ಯಾಸಕರಿದ್ದಾರೆ. ನಿಡಗುಂದಿಯ ಡಾ. ವೀರಪ್ಪ ಸಂಕನೂರ ಸರ್ಕಾರಿ ಪಿಯು ಕಾಲೇಜಿಗೆ ಪ್ರತಿವರ್ಷ ಉತ್ತಮ ಫಲಿತಾಂಶ ಲಭಿಸುತ್ತಿದೆ. ಕಾಲೇಜಿನಲ್ಲಿ ಓಟ್ಟು ೭ಕಾಯಂ ಉಪನ್ಯಾಸಕರಿರಬೇಕು. ಸದ್ಯ ೪ ಜನರಿದ್ದು, ಇಬ್ಬರು ಅತಿಥಿ ಉಪನ್ಯಾಸಕರ ಜತೆಗೆ ಬೇರೆ ಕಾಲೇಜಿನ ಒಬ್ಬ ಉಪನ್ಯಾಸಕರನ್ನು ನಿಯುಕ್ತಿ ಮಾಡಿಕೊಳ್ಳಲಾಗಿತ್ತು. ಅಲ್ಲದೆ ಈ ತಿಂಗಳ (ಮೇ) ಅಂತ್ಯಕ್ಕೆ ಸಮಾಜಶಾಸ್ತ್ರ ಉಪನ್ಯಾಸಕರು ನಿವೃತ್ತಿ ಹೊಂದಲಿದ್ದಾರೆ. ನರೇಗಲ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು ೧೪ ಕಾಯಂ ಉಪನ್ಯಾಸಕರಿರಬೇಕು. ಆದರೆ ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಅಕೌಂಟೆನ್ಸಿ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯಗಳ ಕಾಯಂ ಉಪನ್ಯಾಸಕರ ಕೊರತೆಯಿದೆ. ಅಲ್ಲದೆ ಸದ್ಯದಲ್ಲಿಯೇ ಕನ್ನಡ ಉಪನ್ಯಾಸಕರು ಪದೋನ್ನತಿ ಹೊಂದಲಿದ್ದಾರೆ. ಮುಶಿಗೇರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ೭ ಕಾಯಂ ಉಪನ್ಯಾಸಕರ ಪೈಕಿ ಇಬ್ಬರು ಮಾತ್ರ ಇದ್ದಾರೆ.ಗಜೇಂದ್ರಗಡದ ಕಾಲೇಜಿನಲ್ಲಿ ಮಹಿಳಾ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕದ ಅವಶ್ಯಕತೆಯಿದ್ದು, ಇನ್ನುಳಿದ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕಿದ್ದರೂ ಸಹ ಆಡಳಿತ ಹಾಗೂ ಸಂಬಂಧಿಸಿದವರು ಇತ್ತ ಗಮನ ಹರಿಸದಿರುವುದು ವಿಪರ್ಯಾಸ.
ಗಜೇಂದ್ರಗಡ ಮತ್ತು ನರೇಗಲ್ ಪಟ್ಟಣಗಳಲ್ಲಿ ಬಹಳಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದು, ಅವುಗಳಲ್ಲಿ ಪ್ರವೇಶ ಪಡೆಯುವುದು ಬಹಳಷ್ಟು ವಿದ್ಯಾರ್ಥಿಗಳ ಮೊದಲ ಆದ್ಯತೆಯಾಗಿದೆ. ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ದೊರೆಯದಿದ್ದಾಗ ಪರ್ಯಾಯವೆಂಬಂತೆ ಸರ್ಕಾರಿ ಕಾಲೇಜುಗಳನ್ನು ಅವಲಂಬಿಸುವ ಸ್ಥಿತಿ ಈಗಾಗಲೇ ತಾಲೂಕಿನ ನಿರ್ಮಾಣವಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ಉಪನ್ಯಾಸಕರು, ಸಿಬ್ಬಂದಿ ನೀಡುವುದರ ಜತೆಗೆ ಮೂಲ ಸೌಲಭ್ಯ ಒದಗಿಸಲು ಜನಪ್ರತಿನಿಧಿಗಳು ಮತ್ತು ಸರ್ಕಾರ ಕ್ರಮ ಕೈಗೊಂಡಲ್ಲಿ ಸರ್ಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಿಗಿಂತ ಉತ್ತಮ ಶಿಕ್ಷಣ ನೀಡುವುದರಲ್ಲಿ ಸಂಶಯವಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಉಪನ್ಯಾಸಕರು ತಿಳಿಸುತ್ತಿದ್ದಾರೆ.ಬಾಕ್ಸ್
ಉಪನ್ಯಾಸಕ್ಕಿಂತ ಹಾಜರಾತಿ ಮುಖ್ಯ !ಪಟ್ಟಣದಲ್ಲಿ ಸರ್ಕಾರಿ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರು ಎರಡ್ಮೂರು ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವ ಪರಿಣಾಮ ಒಂದು ಅವಧಿ ಈ ಕಾಲೇಜಿನಲ್ಲಿ ಮುಗಿಸಿದರೆ ಇನ್ನೊಂದು ಅವಧಿ ಮತ್ತೊಂದು ಕಾಲೇಜಿನ ಉಪನ್ಯಾಸ ಮಾಡುತ್ತಾರೆ. ಪರಿಣಾಮ ವಿದ್ಯಾರ್ಥಿಗಳಿಗೆ ಉಪನ್ಯಾಸಕಿಂತ ಅವರ ಹಾಜರಿ ಮುಖ್ಯವಾಗಿಸಿಕೊಂಡಿರುತ್ತಾರೆ. ಹೀಗಾಗಿ ಪ್ರವೇಶಾತಿ ಹಾಗೂ ಫಲಿತಾಂಶ ಕುಂಠಿತವಾಗುತ್ತಿದೆ. ಗಜೇಂದ್ರಗಡ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣವಾಗುತ್ತಿದೆ. ಅಲ್ಲದೆ ಕಲಾ ವಿಭಾಗ ಹೊರತುಪಡಿಸಿದರೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಫಲಿತಾಂಶ ಸೊರಗುತ್ತಿದೆ. ಹೀಗಾಗಿ ಕಾಯಂ ಉಪನ್ಯಾಸಕರ ನೇಮಕಕ್ಕೆ ಸರ್ಕಾರಕ್ಕೆ ಮುಂದಾಗಬೇಕು ಎನ್ನುವ ಒತ್ತಾಯಗಳಿವೆ.
ಕಾಲೇಜುಗಳು; ಒಟ್ಟು ಇರಬೇಕಾದ ಉಪನ್ಯಾಸಕರ ಸಂಖ್ಯೆ; ಖಾಯಂ ಉಪನ್ಯಾಸಕರುನರೇಗಲ್ -೧೪-೩
ಮುಶಿಗೇರಿ -೭ -೨ನಿಡಗುಂದಿ -೭ -೪
ಗಜೇಂದ್ರಗಡ-೧೧-೬ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಹಾಗೂ ಫಲಿತಾಂಶ ವರ್ಷದಿಂದ ವರ್ಷಕ್ಕೆ ಸುಧಾರಣೆಯಾಗುತ್ತಿದೆ ಎಂದು ಪ್ರಭಾರಿ ಪ್ರಾಚಾರ್ಯರು, ಸರ್ಕಾರಿ ಪಿಯು ಕಾಲೇಜು ಗಜೇಂದ್ರಗಡ ಬಿ.ಬಿ.ಗುರಿಕಾರ ತಿಳಿಸಿದ್ದಾರೆ.
ನಮ್ಮ ಕಾಲೇಜಿಗೆ ಪ್ರತಿ ವರ್ಷ ಉತ್ತಮ ಫಲಿತಾಂಶ ಲಭಿಸುತ್ತಿದೆ. ಕಾಲೇಜಿನಲ್ಲಿ ಪ್ರಾಚಾರ್ಯರು, ಮೂವರು ಉಪನ್ಯಾಸಕರ ಹಾಗೂ ಡಿ ದರ್ಜೆ ನೌಕರರ ಕೊರತೆಯ ನಡುವೆಯೂ ಸಹ ಫಲಿತಾಂಶ ಉತ್ತಮವಿದೆ. ಎಸ್.ಆರ್.ಕರಮಡಿ ತಿಳಿಸಿದ್ದಾರೆ.