ಶಿರಹಟ್ಟಿ: ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ವಿದ್ಯಾರ್ಥಿಗಳು ಪ್ರಾಮಾಣಿಕ ಜೀವನಶೈಲಿ ಆಯ್ಕೆ ಮಾಡಿಕೊಂಡು ಮನುಕುಲಕ್ಕೆ ಒಳ್ಳೆಯದನ್ನು ಬಯಸುವವರಾಗಿ ಭವ್ಯ ಭಾರತದ ಆಶಾಕಿರಣರಾಗಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಕರೆ ನೀಡಿದರು.ಜಗದ್ಗುರು ಫಕೀರೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಸ್ವಯಂಚಾಲಿತ ಗ್ರಂಥಾಲಯ ಲೋಕಾರ್ಪಣೆ, ಪುಸ್ತಕ ಬಿಡುಗಡೆ, ೨೦೨೫- ೨೬ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆಗೇರುವ ಜತೆಗೆ ಸಮಾಜಕ್ಕೆ ಒಳ್ಳೆಯ ನಾಗರಿಕನಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.

ಕನಸುಗಳನ್ನೇ ಗುರಿಯಾಗಿ ಹಿಡಿದು ಶ್ರಮದ ಹಾದಿಯಲ್ಲಿ ಹೆಜ್ಜೆ ಇಟ್ಟು ಸವಾಲುಗಳನ್ನು ಗೆದ್ದು ಮುನ್ನಡೆದು ಯಶಸ್ಸಿನ ಶಿಖರ ತಲುಪಬೇಕು. ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಳಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ಕಷ್ಟದ ಹಾದಿಯಲ್ಲಿ ಯಶಸ್ಸು ಗ್ಯಾರಂಟಿ ಇದೆ. ಸತತ ಪ್ರಯತ್ನ ಮಾಡಿದರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.ಪ್ರಾಂಶುಪಾಲ ಡಾ. ರಾಜಶೇಖರ ದಾನರಡ್ಡಿ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಶಿಕ್ಷಣ ಪದ್ಧತಿಯಲ್ಲಿಯೂ ಬದಲಾವಣೆಯಾಗಿದ್ದು, ವಿದ್ಯಾರ್ಥಿಗಳಿಗೆ ಜಗತ್ತಿನ ಸವಾಲುಗಳನ್ನು ಎದುರಿಸುವಂಥ ಶಿಕ್ಷಣವನ್ನು ಶಿಕ್ಷಕ ಸಮೂಹ ನೀಡಬೇಕಾಗಿದೆ. ಬದಲಾಗುತ್ತಿರುವ ದಿನಗಳಲ್ಲಿ ಶಿಕ್ಷಕರಿಂದ ಸಮಾಜ ಹಲವು ನಿರೀಕ್ಷೆಗಳನ್ನು ಮಾಡುತ್ತಿದ್ದು, ಇದನ್ನು ಅರ್ಥೈಸಿಕೊಂಡು ಕ್ರಿಯಾಶೀಲರಾಗಿ ಪಾಠ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಉಮೇಶ ಅರಹುಣಸಿ ಮಾತನಾಡಿ, ಪೋಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಟಿವಿ, ಮೊಬೈಲ್‌ನಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ ಎಂದರು.

ಹುಮಾಯೂನ ಮಾಗಡಿ, ಅಜ್ಜಣ್ಣ ಪಾಟೀಲ, ಡಾ. ಸುನೀಲ ಬುರಬುರೆ, ಪರಶುರಾಮ ಡೊಂಕಬಳ್ಳಿ, ನಾಗರಾಜ ಲಕ್ಕುಂಡಿ, ಸಿ.ಪಿ. ಕಾಳಗಿ, ತಿಪ್ಪಣ್ಣ ಕೊಂಚಿಗೇರಿ, ಕೆ.ಎ. ಬಳಿಗೇರ, ಮಂಜುನಾಥ ಸೊಂಟನೂರ, ಸಿ.ಸಿ. ನೂರಶೆಟ್ಟರ, ಜಾನು ಲಮಾಣಿ, ಬಸವರಾಜ ಕುರಗುಂದ, ಡಾ. ಶಂಕರ ಬಾರಿಕೇರ, ಜಯಪ್ರಕಾಶ ವನಹಳ್ಳಿ, ಶೋಭಾ ಯಕ್ಕೇಲಿ, ಹರ್ಷಿತ ವೈ.ಆರ್., ಡಾ. ಅನುಷ ಎಚ್.ಸಿ., ಎಚ್.ಎಂ. ದೇವಗಿರಿ ಇತರರು ಇದ್ದರು.