ಸಾರಾಂಶ
ಹೊಸಪೇಟೆ: ಆರೋಗ್ಯ ಪೂರ್ಣ ಪರಿಸರ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಪರಿಸರ ಪ್ರೇಮಿಗಳಾಗಬೇಕು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ನಗರದ ವಿಜಯನಗರ ಪ್ರಾದೇಶಿಕ ಅರಣ್ಯ ವಿಭಾಗ, ಪ್ರಾದೇಶಿಕ ಅರಣ್ಯ ವಲಯ, ಸಾಮಾಜಿಕ ಅರಣ್ಯ ವಲಯದ ಸಹಯೋಗದಲ್ಲಿ ಜಂಬುನಾಥನಹಳ್ಳಿ ಗುಡ್ಡದ ಹತ್ತಿರ ಗುರುವಾರ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ನಮ್ಮ ಜೀವನವಿದ್ದಂತೆ, ಸುಂದರವಾದ ಪರಿಸರವನ್ನು ನಾವು ನಿರ್ಮಾಣ ಮಾಡಬೇಕಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಪರಿಸರ ಪ್ರೇಮಿಗಳಾಗಬೇಕು ಎಂದು ಸಲಹೆ ನೀಡಿದರು.ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಪರಿಸರದಿಂದ ನಮಗೆ ಉತ್ತಮವಾದ ಆಮ್ಲಜನಕ ದೊರೆಯುತ್ತದೆ. ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಎಲ್ಲರೂ ಒಗ್ಗಟ್ಟಾಗಿ ಆರೋಗ್ಯ ಪೂರ್ಣ ಪರಿಸರ ನಿರ್ಮಾಣ ಮಾಡಬೇಕು. ಇದಕ್ಕಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದರು.
ಬಳ್ಳಾರಿಯ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ರವಿ ಜೆ. ಪ್ರ‍್ರಾಸ್ತಾವಿಕ ಮಾತನಾಡಿ, ತಾಯಿ ಹೆಸರಿನಲ್ಲಿ ಇಂದು ನಾವು ಗಿಡಗಳನ್ನು ನೆಟ್ಟಿದ್ದೇವೆ. ಸರ್ವಕಾಲಕ್ಕೂ ತಾಯಿಯೇ ಶ್ರೇಷ್ಠ. ತಾಯಿಯ ಹೆಸರಲ್ಲಿ ಗಿಡ ನೆಟ್ಟರೆ ಆ ಮರಗಳು ಸಮೃದ್ದಿಯಾಗಿ ಬೆಳೆಯುತ್ತವೆ. ನಮ್ಮಲ್ಲಿ ವಿವಿಧ ಜಾತಿಯ ಅನೇಕ ಮರಗಳಿವೆ. ಅವುಗಳನ್ನು ನಾವು ಕಾಪಾಡಬೇಕಾಗಿದೆ ಎಂದು ಹೇಳಿದರು.ಎಸ್ಪಿ ಶ್ರೀಹರಿ ಬಾಬು ಬಿ.ಎಲ್., ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಸಹಾಯಕ ಆಯುಕ್ತ ಮಹಮ್ಮದ್ ಅಲಿ ಅಕ್ರಮ ಷಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ, ನಗರಸಭೆ ಪೌರಾಯುಕ್ತ ಈರಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ನಾಯ್ಕ್, ಹೊಸಪೇಟೆ ವಲಯ ಅರಣ್ಯಾಧಿಕಾರಿ ಭರತ್‌ರಾಜ್, ಸಾಮಾಜಿಕ ಅರಣ್ಯಾಧಿಕಾರಿ ನಾಗರಾಜ್.ಕೆ, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಅಂಬೇಡ್ಕರ್ ಶಾಲೆ ಮತ್ತು ಆದರ್ಶ ವಿದ್ಯಾಲಯದ ಶಿಕ್ಷಕರು-ವಿದ್ಯಾರ್ಥಿಗಳು ಇದ್ದರು.