ಕದ್ರಾ ಜಲಾಶಯದ ನಾಲ್ಕು ಗೇಟ್‌ನಿಂದ ನೀರು ಹೊರಕ್ಕೆ

| Published : Jul 06 2024, 12:48 AM IST

ಕದ್ರಾ ಜಲಾಶಯದ ನಾಲ್ಕು ಗೇಟ್‌ನಿಂದ ನೀರು ಹೊರಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸತತವಾಗಿ ಭಾರಿ ಮಳೆಯಾದರೆ ಕದ್ರಾ ಜಲಾಶಯದಿಂದ ನೀರು ಹೊರಕ್ಕೆ ಬಿಡುವ ಸೂಚನೆಯನ್ನು ಶುಕ್ರವಾರ ಬೆಳಗ್ಗೆ ವೇಳೆ ಕೆಪಿಸಿ ನೀಡಿತ್ತು. ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದ ಕಾರಣ ಸಂಜೆ ವೇಳೆ ೪ ಗೇಟ್‌ನಿಂದ ೬೦೦೦ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ.

ಕಾರವಾರ: ತಾಲೂಕಿನಾದ್ಯಂತ ಶುಕ್ರವಾರ ಸುರಿದ ಭಾರಿ ಮಳೆಯಿಂದ ಹಲವೆಡೆ ರಸ್ತೆ, ಮನೆಗಳಿಗೆ ನೀರು ನುಗ್ಗಿತ್ತು. ಕದ್ರಾ ಜಲಾಶಯದ ಮಟ್ಟದಲ್ಲಿ ಏರಿಕೆಯಾಗಿದ್ದು, ನಾಲ್ಕು ಗೇಟ್‌ನಿಂದ ೬೦೦೦ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ವಿದ್ಯುತ್‌ ಉತ್ಪಾದನೆಗೆ 22000 ಕ್ಯುಸೆಕ್‌ ನೀರು ಬಿಡಲಾಗಿದೆ.

ಬೈತಖೋಲ, ಹೈಚರ್ಚ್ ರಸ್ತೆ ಒಳಗೊಂಡು ಹಲವು ಕಡೆ ರಸ್ತೆಗಳು ಜಲಾವೃತವಾಗಿತ್ತು. ಅರಗಾ, ಚೆಂಡಿಯಾ ಬಳಿ ಹಲವು ಮನೆಗಳಿಗೆ ನೀರು ನುಗ್ಗಿತ್ತು. ನೌಕಾನೆಲೆ ಆವಾರಗೋಡೆ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಚರಂಡಿ ಮೂಲಕ ನೀರು ಹರಿಯಲು ಆಗುತ್ತಿಲ್ಲ. ಜತೆಗೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡಬೆಟ್ಟದಿಂದ ಹರಿದು ಬಂದ ಮಳೆಯ ನೀರು ಸರಾಗವಾಗಿ ಸಮುದ್ರಕ್ಕೆ ಹರಿದು ಹೋಗಲು ಸಾಧ್ಯವಾಗದೇ ಮನೆಗಳಿಗೆ ನೀರು ನುಗ್ಗಿತ್ತು. ಅರಗಾ, ಚೆಂಡಿಯಾ ಗ್ರಾಮದ ನಿವಾಸಿಗಳು ಆತಂಕದಲ್ಲಿ ಕಾಲ ಕಳೆಯುವಂತಾಯಿತು. ಕಳೆದ ಹಲವು ವರ್ಷದಿಂದ ಪ್ರತಿ ಮಳೆಗಾಲದಲ್ಲಿ ಹೆದ್ದಾರಿ ಕೆಲಸ, ನೌಕಾನೆಲೆ ಆವಾರಗೋಡೆಯಿಂದ ಈ ಭಾಗದಲ್ಲಿ ನೆರೆ ಪರಿಸ್ಥಿತಿ ಎದುರಿಸುವಂತಾಗಿದೆ.

ನೀರು ಹೊರಕ್ಕೆ: ಸತತವಾಗಿ ಭಾರಿ ಮಳೆಯಾದರೆ ಕದ್ರಾ ಜಲಾಶಯದಿಂದ ನೀರು ಹೊರಕ್ಕೆ ಬಿಡುವ ಸೂಚನೆಯನ್ನು ಶುಕ್ರವಾರ ಬೆಳಗ್ಗೆ ವೇಳೆ ಕೆಪಿಸಿ ನೀಡಿತ್ತು. ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದ ಕಾರಣ ಸಂಜೆ ವೇಳೆ ೪ ಗೇಟ್‌ನಿಂದ ೧೬೦೦೦ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ.

೩೪.೫೦ ಮೀ. ಈ ಜಲಾಶಯದ ಗರಿಷ್ಠ ಮಟ್ಟವಾಗಿದ್ದು, ನೆರೆ ಉಂಟಾಗುವುದುನ್ನು ತಪ್ಪಿಸಲು ಜಿಲ್ಲಾಡಳಿತ ೩೧ ಮೀ. ಮಾತ್ರ ನೀರು ಸಂಗ್ರಹಕ್ಕೆ ಅವಕಾಶವನ್ನು ನೀಡಿದೆ. ಶುಕ್ರವಾರ ಬೆಳಗ್ಗೆ ವೇಳೆ ಜಲಾಶಯದ ಮಟ್ಟ ೩೦.೩೩ ಮೀ. ತಲುಪಿದ್ದು, ಒಳ ಹರಿವುದು ಹೆಚ್ಚಾಗಿ ನೀರಿನ ಮಟ್ಟದಲ್ಲಿ ಏರಿಕೆಯಾದರೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ನೀರು ಹೊರಬಿಡಲಾಗುತ್ತದೆ.

ಮಳೆ ಮುಂದುವರಿದರೆ ಗೇಟ್‌ಗಳ ಮೂಲಕ ನೀರನ್ನು ಹೊರಬಿಡುವ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಜಲಾಶಯದ ಕೆಲಭಾಗದ ಜನರು ಪ್ರವಾಹ ಉಂಟಾಗುವ ಆತಂಕಕ್ಕೆ ಒಳಗಾಗಿದ್ದಾರೆ. ೨೦೧೯ ಹಾಗೂ ೨೦೨೧ರಲ್ಲಿ ಜಲಾಶಯದಿಂದ ನೀರು ಹೊರಬಿಟ್ಟು ಪ್ರವಾಹ ಸೃಷ್ಟಿಯಾಗಿ ಸಾಕಷ್ಟು ನಷ್ಟವಾಗಿತ್ತು.