ಆದಿಚುಂಚನಗಿರಿ ಇನ್ಸಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ನಿಂದ ಎಮಿನೆನ್ಸ್-2026 ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬದಲಾಗುತ್ತಿರುವ ಸನ್ನಿವೇಶದೊಂದಿಗೆ ವಿದ್ಯಾರ್ಥಿಗಳು ಹೆಜ್ಜೆಹಾಕಬೇಕು ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಎ.ಗೌತಮ್ ಹೇಳಿದರು.
ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಆದಿಚುಂಚನಗಿರಿ ಇನ್ಸಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ನಿಂದ ಆಯೋಜಿಸಿದ್ಧ ಎಮಿನೆನ್ಸ್-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಕೃತಕಬುದ್ಧಿ ಅತ್ಯಂತ ಪ್ರಭಾವ ಶಾಲಿ ಹಾಗೂ ಸಮಾಜದ ಪ್ರತಿ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಬದಲಾಗುತ್ತಿರುವ ಸನ್ನಿವೇಶ ದೊಂದಿಗೆ ವಿದ್ಯಾರ್ಥಿಗಳು ಹೆಜ್ಜೆಹಾಕಬೇಕು. ಅದನ್ನು ಎದುರಿಸುವ ಸಾಮರ್ಥ್ಯವನ್ನು ಎಐ ಜ್ಞಾನದ ಮೂಲಕ ಪಡೆದುಕೊಂಡಲ್ಲಿ ಉತ್ತಮ ಭವಿಷ್ಯ ನಿಮ್ಮದಾಗಲಿದೆ ಎಂದು ಹೇಳಿದರು.ಕಂಪನಿಗಳು ಪ್ರತಿಭಾಸಕ್ತರನ್ನು ಗುರುತಿಸುವ ಕೆಲಸ ಮಾಡಲಿದೆ. ಆ ಪ್ರಯೋಗದಲ್ಲಿ ಯಶಸ್ಸು ಸಾಧಿಸಲಿಕ್ಕೆ ಬಹಳಷ್ಟು ಶ್ರಮವಿರಬೇಕು. ಒಂದು ವೇಳೆ ಯಶಸ್ಸು ಕಂಡಲ್ಲಿ ಒಳ್ಳೆಯ ಬೆಳವಣಿಗೆ ಅಥವಾ ವಿಫಲತೆರಾದರೆ ಮುಂದಿನ ಯಶಸ್ಸಿಗೆ ದೊಡ್ಡ ಮೆಟ್ಟಿಲಾಗಲಿದೆ. ಯಾವುದೇ ವಿಷಯ ಅರಿಯಲು ತಂತ್ರಜ್ಞಾನ ಅಥವಾ ಪ್ರಸ್ತಾಪನೆಯ ಶೇ.30 ರಷ್ಟು ಅರಿವಿರಬೇಕು. ಕಂಪನಿಗಳ ಮುಂದೆ ಪ್ರಸ್ತುತಪಡಿಸಲು ಸಮರ್ಥರಾದರೆ ಯಶಸ್ಸು ತಾನಾಗಿಯೇ ಹುಡುಕಿ ಬರಲಿದೆ. ಜತೆಗೆ ಉತ್ತಮ ಉದ್ಯಮಿ ಗಳಾಗಿ ನಾಲ್ಕಾರು ಜನರಿಗೆ ಉದ್ಯೋಗ ನೀಡಬಹುದು ಎಂದರು.
ತಂತ್ರಜ್ಞಾನದ ಮೇಲೆ ಹಿಡಿತ ಹೊಂದಲು ಮೊದಲು ಮನುಷ್ಯ ತಂತ್ರಜ್ಞಾನದ ಹಿಡಿತ ಸಾಧಿಸುವ ಅಂಶ ಕಲಿಯಬೇಕು. ಈ ತರಬೇತಿ ಕೇವಲ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ಪದವೀಧರರು, ವಾಣಿಜ್ಯ, ವ್ಯವಹಾರ ನಿರ್ವಹಣಾ ವಿದ್ಯಾರ್ಥಿಗಳು ಸಹ ತಂತ್ರಜ್ಞಾನದ ವಾಸ್ತುಶಿಲ್ಪವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವ್ಯವಹಾರಪ್ರಾರಂಭಿಸಲು ಮೊದಲು ಜ್ಞಾನ ಪಡೆದುಕೊಳ್ಳಬೇಕು. ಬೇರೆಯವ ಬಳಿ ಕೆಲಸ ಮಾಡುವುದು ಬಹಳ ಮುಖ್ಯ. ಒಂದೆರಡು ವರ್ಷಗಳಲ್ಲಿ ಅನುಭವ ಪಡೆದುಕೊಳ್ಳಬೇಕು. ನಂತರ ನೀವು ಆ ಉದ್ಯಮ ಮಾಡಲು ಹೊರಟಲ್ಲಿ ಯಶಸ್ವಿ ಯಾಗುತ್ತೀರಿ ಎಂದು ಸಲಹೆ ನೀಡಿದರು.ಎಐಬಿಎಂ ಕಾಲೇಜು ಪ್ರಾಚಾರ್ಯ ಡಾ. ಕೆ.ಎಸ್.ಪ್ರಕಾಶ್ ರಾವ್ ಮಾತನಾಡಿ, ಸ್ವಯಂ ನಿರ್ವಹಣೆ ಮತ್ತು ಸ್ವಯಂ ಅವಲಂಬನೆಗೆ ಉದ್ಯಮಶೀಲರಾಗಿ ಪ್ರವೇಶಿಸುವ ಮೂಲಕ ಜನರಿಗೆ ಉದ್ಯೋಗ ನೀಡುವ ಭಾಗಕ್ಕೆ ಬರಬೇಕು. ಕೇವಲ ಅಕೌಂಟೆಂಟ್ ಅಥವಾ ವ್ಯವಸ್ಥಾಪಕರಾಗುವ ಉದ್ದೇಶ ಪರಿಹರಿಸದಿರಬಹುದು. ಕೃತಕ ಬುದ್ದಿಮತ್ತೆ, ಯಂತ್ರ ಕಲಿಕೆ ಮತ್ತು ತಂತ್ರಜ್ಞಾನವನ್ನು ಕಲಿಕೆಗೆ ಅಳವಡಿಸಿಕೊಂಡು ಸಂಯೋಜಿಸಬೇಕು ಎಂದು ತಿಳಿಸಿದರು.
ಈ ವೇಳೆ ಎಐಟಿ ಕಾಲೇಜು ಉಪ ಪ್ರಾಚಾರ್ಯ ಎಐಬಿಎಂ ಕಾಲೇಜು ಅಧ್ಯಾಪಕ ಪ್ರದೀಪ್ ಜಿ.ದೇಸಾಯಿ, ವಿವಿಧ ವಿಭಾಗದ ಮುಖ್ಯಸ್ಥರಾದ ಕಾವ್ಯ, ಶಾಂಭವಿ ಉಪಸ್ಥಿತರಿದ್ದರು.