ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂದರೆ ಭಯಪಡುವ ಕಾಲ ಹೋಗಿದೆ. ಆದರೂ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಭಯದಿಂದ ಪರೀಕ್ಷೆಯನ್ನು ಎದುರಿಸುತ್ತಾರೆ. ಇದರಿಂದ ಹೊರಬಂದು ಧೈರ್ಯ, ಸಂಭ್ರಮದಿಂದ ಪರೀಕ್ಷೆ ಬರೆದರೆ ಉತ್ತಮ ಫಲಿತಾಂಶ ಲಭಿಸಲಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥಸ್ವಾಮೀಜಿ ತಿಳಿಸಿದರು.ತಾಲೂಕಿನ ಅಣತಿ ಗ್ರಾಮದಲ್ಲಿ ಬಿಜಿಎಸ್ ಪಬ್ಲಿಕ್ ಶಾಲೆ ಹಾಗೂ ಶ್ರೀದಿಗಂಬರೇಶ್ವರ ಪ್ರೌಢಶಾಲೆ ವತಿಯಿಂದ ನಡೆದ ಸರಸ್ವತಿ ಪೂಜೆ ಹಾಗೂ ಮಾತಾ- ಪಿತೃ ಪಾದಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅವರು ಆಶೀರ್ವಚನ ನೀಡಿದರು. ಪರೀಕ್ಷೆಯ ಭಯದಲ್ಲಿ ಹಗಲು- ಇರುಳು ಓದುವುದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ವಿದ್ಯಾರ್ಥಿಗಳು ಇಷ್ಟಪಟ್ಟು ಓದಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಬರುತ್ತವೆ ಎಂದರು.
ಪರೀಕ್ಷೆಯ ಸಮಯದಲ್ಲಿ ಗುರುಗಳು, ಪೋಷಕರು ಶುಭ ಹಾರೈಸುತ್ತಾರೆ. ಉತ್ತಮ ಹಾದಿಯಲ್ಲಿ ಮಕ್ಕಳು ಸಾಗಬೇಕು ಎಂದು ಸಾಕಷ್ಟು ಮಾರ್ಗದರ್ಶನ ನೀಡುತ್ತಾರೆ, ಇದನ್ನು ಮಕ್ಕಳು ಪಾಲನೆ ಮಾಡಿದರೆ ಮುಂದಿನ ಬದುಕು ಹಸನಾಗಲಿದೆ, ಮಕ್ಕಳಿಗೆ ಪವಿತ್ರ ಭಾವನೆಗಳಿರುತ್ತವೆ. ಆದರೆ ಇತ್ತೀಚೆಗೆ ಮೊಬೈಲ್, ಸೋಷಿಯಲ್ ಮೀಡಿಯಾಗಳು ಮಕ್ಕಳ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ ಎಂದರು.ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರ ನೀಡುತ್ತೇವೆ, ಮನೆಯಲ್ಲಿ ಪೋಷಕರು ಸಹ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಎಲ್ಲಾ ವಿಷಯಕ್ಕೂ ಶಾಲೆ ಕಡೆ ಕೈ ತೋರಿಸಿದರೆ ಸಾಲದು, ನಮ್ಮ ಸಂಸ್ಕಾರ ಮನೆಯಿಂದ ಆರಂಭವಾಗಬೇಕು, ಈ ಮಣ್ಣಿನ ಸಂಪ್ರದಾಯವನ್ನು ಮಕ್ಕಳಿಗೆ ಬಿತ್ತಿದರೆ ಅವರು ಎಂದಿಗೂ ಹಾದಿ ತಪ್ಪುವುದಿಲ್ಲ, ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಲದು, ಜೀವನದಲ್ಲಿಯೂ ಉತ್ತೀರ್ಣರಾಗಬೇಕು ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಎ.ಟಿ.ಶಿವರಾಂ ಮಾತನಾಡಿ, ವಿದ್ಯಾರ್ಥಿಗಳು ಸಣ್ಣ ಪುಟ್ಟ ಕನಸು ಕಾಣುವುದು ಅಪರಾದ, ದೊಡ್ಡ ಕನಸು ಕಾಣಬೇಕು, ಆಗ ಜೀವನದಲ್ಲಿ ಸಾಧನೆಯ ಹಾದಿ ಹಿಡಿಯಲು ಅನುಕೂಲವಾಗುತ್ತದೆ. ಶಿಕ್ಷಣಕ್ಕಿಂತ ಇಂದು ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದೆ, ಸಾಕಷ್ಟು ಮಂದಿ ಪಠ್ಯ ಶಿಕ್ಷಣಕ್ಕಿಂತ ತಂತ್ರಜ್ಞಾನದ ಕಡೆ ಗಮನ ಕೊಡಬೇಕಾಗಿದೆ ಎಂದರು.
ಉದ್ಯೋಗ ಪಡೆಯುವಾಗ ನಿಮ್ಮ ಅಂಕಪಟ್ಟಿ, ಪದವಿ ಪಟ್ಟಿಗಳನ್ನು ವಿದೇಶಿ ಕಂಪನಿಗಳು ಪರಿಗಣಿಸುವುದಿಲ್ಲ, ನಿಮ್ಮಲ್ಲಿ ಇರುವ ಕೌಶಲ್ಯ ಮನೋಭಾವ, ಗುಣ ಹಾಗೂ ನಡತೆಯನ್ನು ಮಾನದಂಡವಾಗಿ ಇಟ್ಟುಕೊಂಡು ಉದ್ಯೋಗ ಕೊಡುತ್ತವೆ, ಸಾಕಷ್ಟು ಮಂದಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು ವಿದೇಶಿ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದನ್ನು ಮನದಲ್ಲಿ ಇಟ್ಟುಕೊಂಡು ಶಿಕ್ಷಣದ ಜೊತೆಯಲ್ಲಿ ಕೌಶಲ್ಯವನ್ನೂ ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ಮಾತಾ- ಪಿತೃರ ಪಾದ ಪೂಜೆ ಮಾಡಿದರು, ಅಣತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್, ಮುಖಂಡರಾದ ವೆಂಕಟೇಶ್, ಶಿವೇಗೌಡ, ಯೋಗಾನಂದಸ್ವಾಮಿ, ಕಾಂತರಾಜು, ಕೃಷ್ಣೇಗೌಡ, ಬಿಜಿಎಸ್ ಶಾಲೆ ಮುಖ್ಯ ಶಿಕ್ಷಕಿ ಭಾರತಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಭಾಸ್ಕರೇಗೌಡ, ಗುಡಿಗೌಡ, ಶಿವಸ್ವಾಮಿ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.