ಸಾರಾಂಶ
ಶಿಗ್ಗಾಂವಿ: ಸತತ ಪ್ರಯತ್ನ ಮತ್ತು ನಿರ್ದಿಷ್ಟ ಗುರಿಗಳನ್ನು ಹೊಂದಿದಾಗ ಮಾತ್ರ ವಿದ್ಯಾರ್ಥಿಗಳು ಸಫಲರಾಗಲು ಸಾಧ್ಯ. ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರತಿಭಾವಂತರಾದರಷ್ಟೇ ಸಾಲದು. ಬಹುಮುಖ ಪ್ರತಿಭೆಗಳಾಗಿ ಹೊರಹೊಮ್ಮಿದಾಗ ಮಾತ್ರ ಅವಕಾಶಗಳು ಲಭಿಸಲು ಸಾಧ್ಯ ಎಂದು ಭಾರತ್ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ದುಂಡಿಗೌಡ್ರು ಹೆಳಿದರು.
ತಾಲೂಕಿನ ಬನ್ನೂರು ಗ್ರಾಮದಲ್ಲಿ ಎಜುಕೇಶನಲ್ ವೆಲ್ಫೇರ್ ಫೌಂಡೇಶನ್‌ನವರು ಗ್ರಾಮದ ವ್ಹಿ.ಡಿ. ಹೊಸಗೌಡ್ರ ಸರ್ಕಾರಿ ಪ್ರೌಢಶಾಲೆಯ ಸಹಯೋಗದೊಂದಿಗೆ, ಬನ್ನೂರ್ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಚರ್ಚಾ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಚರ್ಚಾ ಸ್ಪರ್ಧೆಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮಾನಸಿಕ ವಿಕಸನಕ್ಕೆ ದಿವ್ಯ ಔಷಧಿ ಇದ್ದಂತೆ. ಶಿಕ್ಷಣ ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದ ಉದಾಹರಣೆಗಳಾಗಿ ಡಾಕ್ಟರ್ ಅಬ್ದುಲ್ ಕಲಾಂ, ನರೇಂದ್ರ ಮೋದಿಯವರ ಜೀವನವನ್ನು ಅವಲೋಕಿಸಿದಾಗ ಅರ್ಥವಾಗುತ್ತದೆ. ಶಿಕ್ಷಣ ಬದುಕನ್ನು ರೂಪಿಸುವ ರಹದಾರಿಗಳಾದರೆ ಸಂಸ್ಕಾರ ಹೇಗೆ ಬದುಕಬೇಕು ಎಂಬುವುದನ್ನು ತಿಳಿಸಿಕೊಡುವ ಹೆದ್ದಾರಿಗಳಿದ್ದಂತೆ. ಆದ್ದರಿಂದ ಶಿಕ್ಷಣದೊಂದಿಗೆ ಸಂಸ್ಕಾರವಂತರಾದಾಗ ಮಾತ್ರ ಸಮಾಜದಲ್ಲಿ ಸತ್ಪ್ರಜೆಗಳಾಗಲು ಸಾಧ್ಯ ಎಂದರು.ಈ ನಿಟ್ಟಿನಲ್ಲಿ ಫೌಂಡೇಶನ್‌ನಲ್ಲಿರುವ ಪ್ರತಿಯೊಬ್ಬ ಸ್ವಯಂಸೇವಕರ ಈ ಶೈಕ್ಷಣಿಕ ಸೇವಾ ಮನೋಭಾವ ಶ್ಲಾಘನೀಯವಾದುದ್ದು. ಇಚ್ಛಾಶಕ್ತಿಯೊಂದಿದ್ದರೆ ಇತಿಹಾಸ ನಿರ್ಮಿಸಬಹುದು ಎಂಬುವುದಕ್ಕೆ ಫೌಂಡೇಶನ್ ನವರ ಈ ಕಾರ್ಯಕ್ರಮವೇ ಸಾಕ್ಷಿ. ಮತ್ತಷ್ಟು ನಿಮ್ಮಿಂದಾಗುವ ಇಂತಹ ಕಾರ್ಯಕ್ರಮಗಳ ಜೊತೆ ನಮ್ಮ ಸಂಸ್ಥೆಯ ಸಹಕಾರ ಸದಾ ಇರುತ್ತದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಡಾ. ವೈಜನಾಥ್ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ್ ಆಗಮಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೌಂಡೇಶನ್ ಅಧ್ಯಕ್ಷ ರೇವಣಸಿದ್ದಯ್ಯ ಹಿರೇಮಠ, ವಿಶೇಷ ಅತಿಥಿಗಳಾಗಿ ಗ್ರಾಮದ ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಶಂಕರ್ ಗೌಡ ಪೊಲೀಸ್ ಗೌಡ್ರು, ಅತಿಥಿಗಳಾಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಗಿರಿಜವ್ವ ಬ. ದೊಡ್ಡಮನಿ, ಬನ್ನೂರ್ ಕ್ಲಸ್ಟರ್‌ನ ಸಿಆರ್‌ಪಿ ಡಿ.ಆರ್. ಕಮದೊಡ, ಪ್ರೌಢಶಾಲೆಯ ಪ್ರಧಾನ ಗುರುಗಳಾದ ಬಿ. ಶ್ರೀನಿವಾಸ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಎಫ್.ಸಿ. ಪೊಲೀಸ್‌ಗೌಡ್ರು, ಉಪಾಧ್ಯಕ್ಷ ಭೀಮಪ್ಪ ಹುಕ್ಕೇರಿ ಮತ್ತು ಸದಸ್ಯರು, ಗ್ರಾಮದ ಪ್ರಾಥಮಿಕ ಮತ್ತು ಉರ್ದು ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳು, ಕ್ಲಸ್ಟರ್ ಮಟ್ಟದಲ್ಲಿ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರು, ಸ್ಪರ್ಧಾಳುಗಳು ಹಾಗೂ ಗ್ರಾಮದ ಗುರುಹಿರಿಯರು, ಪಾಲ್ಗೊಂಡಿದ್ದರು,
ಬಸವರಾಜ್ ಮಾಯಣ್ಣವರ್ ಪ್ರಸ್ತಾವಿಕ ಮಾತನಾಡಿದರು. ವೀರಭದ್ರಪ್ಪ ಅಗಡಿ ಸ್ವಾಗತಿಸಿದರು. ಪ್ರವೀಣ್ ಸಿದ್ದಣ್ಣವರ ಕಾರ್ಯಕ್ರಮವನ್ನು ನಿರೂಪಿಸಿದರು. ಜಾಫರ್ ಸಾಬ್ ಇಶುಮಿಯನವರ ವಂದಿಸಿದರು.;Resize=(128,128))
;Resize=(128,128))