ಎಚ್‌ಐವಿ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿ

| Published : Sep 11 2025, 12:03 AM IST

ಸಾರಾಂಶ

ವಿದ್ಯಾರ್ಥಿಗಳು ಯವ್ವನದಲ್ಲಿ ತಮ್ಮ ಜೀವನ ಜೋಪಾನ ಮಾಡಿಕೊಂಡು ಆರೋಗ್ಯಕರ ನಡುವಳಿಕೆ ರೂಪಿಸಿಕೊಳ್ಳಬೇಕು

ಗದಗ: ಜಿಲ್ಲೆಯಲ್ಲಿ ಎಚ್‌ಐವಿ ಪ್ರಮಾಣ ಇಳಿಮುಖವಾಗಿದ್ದು, ವಿದ್ಯಾರ್ಥಿಗಳು ಎಚ್‌ಐವಿ ಏಡ್ಸ್ ಬಗ್ಗೆ ಮಾಹಿತಿ ತಿಳಿದುಕೊಂಡು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಹೇಳಿದರು.ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರಿಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ರಾಜ್ಯ ಏಡ್ಸ್ ಪ್ರೀವೇನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಐಎಂಎ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಮ್ಯಾರಥಾನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಎಚ್‌ಐವಿ, ಏಡ್ಸ್ ತಡೆಗಟ್ಟಲು ತೀವ್ರತರವಾದ ಐಇಸಿ ಪ್ರಚಾರಾಂದೋಲನ-2025ರ ಅಂಗವಾಗಿ ರೆಡ್ ರಿಬ್ಬನ್ ಕಾಲೇಜು ವಿದ್ಯಾರ್ಥಿಗಳಿಗಾಗಿ 5 ಕಿಮೀ ಮ್ಯಾರಥಾನ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ತೀವ್ರತರವಾದ ಐಇಸಿ ಪ್ರಚಾರಾಂದೋಲನದ ಘೋಷ ವಾಕ್ಯದಂತೆ ಸುಸ್ಥಿರ ಡಿಜಿಟಲ್ ಅಭಿವೃದ್ಧಿಗಾಗಿ ಸ್ಥಳೀಯ ಯುವಜನತೆಯ ಪಾತ್ರ ಹಾಗೂ ಗುರಿ ಘೋಷಣೆಯಂತೆ ಯುವಕರು ಸಂಯಮದಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸದೃಢ ಆರೋಗ್ಯ ಹೊಂದಿ ಸಮೃದ್ಧ ಭಾರತ ನಿರ್ಮಾಣ ಮಾಡಲು ಕೈ ಜೋಡಿಸಬೇಕೆಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಡಾ.ಆರ್.ಎನ್.ಗೋಡಬೇಲೆ ಮಾತನಾಡಿ, ವಿದ್ಯಾರ್ಥಿಗಳು ಯವ್ವನದಲ್ಲಿ ತಮ್ಮ ಜೀವನ ಜೋಪಾನ ಮಾಡಿಕೊಂಡು ಆರೋಗ್ಯಕರ ನಡುವಳಿಕೆ ರೂಪಿಸಿಕೊಳ್ಳಬೇಕು ಎಂದರು.

ಡಾ.ಅರುಂಧತಿ ಕುಲಕರ್ಣಿ ಮಾತನಾಡಿ, ಎಚ್‌ಐವಿ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದು, ಜಿಲ್ಲೆಯ ಯುವ ಸಮುದಾಯ ಜಾಗೃತಿ ಮೂಡಿಸಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಸೊನ್ನೆಗೆ ತರಲು ಶ್ರಮಿಸಬೇಕು. ಮ್ಯಾರಥಾನ್‌ ನಡೆಸುವ ಉದ್ದೇಶ ಎಚ್‌ಐವಿ.ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ತಡೆಗಟ್ಟುವುದು, ಎಚ್‌ಐವಿ, ಏಡ್ಸ ತಡೆ ಕಾಯ್ದೆ-2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ಸಹಾಯವಾಣಿ 1097, ಎಸ್.ಟಿ.ಐ ಕಾಯಿಲೆ ಇತ್ಯಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಮ್ಯಾರಾಥಾನ ಸ್ಪರ್ಧೆಯಲ್ಲಿ ಪುರುಷರಲ್ಲಿ ಪ್ರಥಮ ಸ್ಥಾನವನ್ನು ರಮೇಶ ಸಿಂಗಡಾನಕೇರಿ, ದ್ವಿತೀಯ ಸ್ಥಾನವನ್ನು ದೇವರಾಜ ದೊಡಮನಿ,ತೃತೀಯ ಸ್ಥಾನವನ್ನು ಅಶೋಕ ವಡ್ಡರ ಪಡೆದುಕೊಂಡು ಪ್ರಶಸ್ತಿಗೆ ಭಾಜನರಾದರು.

ವಿದ್ಯಾರ್ಥಿನಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ದ್ರಾಕ್ಷಾಯಿಣಿ ಕರ್ಣಿ, ದ್ವಿತೀಯ ಪ್ರೀತಿ ಬ.ಮುಗಳಿ ಹಾಗೂ ತೃತೀಯ ಸ್ಥಾನವನ್ನು ಅಕ್ಷತಾ ಕಲಗುಡಿ ಪಡೆದುಕೊಂಡು ಪ್ರಶಸ್ತಿಗೆ ಭಾಜನರಾದರು.

ಮ್ಯಾರಾಥಾನದಲ್ಲಿ ಸುಮಾರು 250 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕ್ರೀಡಾ ಇಲಾಖೆ ತರಬೇತಿದಾರ ಮಂಜುನಾಥ ಬಾಗಡೆ, ವಿದ್ಯಾ ಕುಲಕರ್ಣಿ, ರೂಪಸೇನ ಚವ್ಹಾಣ, ಸಿದ್ದಪ್ಪ ಲಿಂಗದಾಳ, ಬಸವರಾಜ ಹಿರೇಹಾಳ,ಗುರುರಾಜ ಕೋಟ್ಯಾಳ,ಗಣೇಶ ಬಾಗಡೆ, ಪ್ರವೀಣ ರಾಮಗಿರಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಶಿಕ್ಷಣ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಜೈ ಭೀಮ ಗೀಗೀ ಜಾನಪದ ಕಲಾ ತಂಡ ನೀಲಗುಂದ ಅವರು ಜನಪದ ಗೀತೆಗಳ ಮೂಲಕ ಜಾಗೃತಿ ಮೂಡಿಸಿದರು. ಬಸವರಾಜ ಲಾಳಗಟ್ಟಿ ಸ್ವಾಗತಿಸಿದರು. ರಾಜೇಂದ್ರ ಗಡಾದ ನಿರೂಪಿಸಿ, ವಂದಿಸಿದರು.