ಸಾರಾಂಶ
ಗದಗ: ಮಕ್ಕಳು ಸಾಹಿತ್ಯ ಕಲೆ, ಸಂಗೀತ, ಚಿತ್ರಕಲೆ ಮುಂತಾದವುಗಳ ಬಗ್ಗೆ ಅಭಿರುಚಿ ಬೆಳೆಸಿಕೊಂಡರೆ ಉತ್ತಮ ಸಂಸ್ಕಾರ ಪಡೆಯಬಹುದು ಎಂದು ಸಾಹಿತಿ ಡಿ.ವಿ. ಬಡಿಗೇರ ಹೇಳಿದರು.
ನಗರದ ಕಬ್ಬಿಗರ ಕೂಟದಲ್ಲಿ ಪರಮ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಮಕ್ಕಳಿಗಾಗಿ ಸಾಹಿತ್ಯ ಸವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನೀತಿ ಮೌಲ್ಯಗಳು ಕುಸಿದು ಸಮಾಜದಲ್ಲಿ ಅಪರಾಧ ಪ್ರವೃತ್ತಿ ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ಓದಿನ ಜತೆಗೆ ಉತ್ತಮ ಜೀವನ ಶೈಲಿ ಹಾಗೂ ನೈತಿಕ ಮೌಲ್ಯ ಮಕ್ಕಳಿಗೆ ಕಲಿಸುವುದು ಅನಿವಾರ್ಯವಾಗಿದೆ. ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಟ್ಟು, ಮಕ್ಕಳಿಗೆ ಬಿಡುವಿನ ವೇಳೆಯಲ್ಲಿ ಕಾವ್ಯ,ಕಥೆ, ಸಂಗೀತ ಮುಂತಾದ ಕಲಾ ಪರಂಪರೆಯ ಪರಿಚಯ ಮಾಡಿಕೊಡಲು ಶಿಕ್ಷಕ ಸಮುದಾಯವನ್ನು ಒತ್ತಾಯಿಸಿದರು.
ಕಬ್ಬಿಗರ ಕೂಟದ ಅಧ್ಯಕ್ಷ ನ್ಯಾಯವಾದಿ ಮನೋಹರ ಮೇರವಾಡೆ ಮಾತನಾಡಿ, ಕಬ್ಬಿಗರ ಕೂಟ ಮಕ್ಕಳಿಗಾಗಿ ಹಮ್ಮಿಕೊಂಡ ಸಾಹಿತ್ಯ ಸವಿ ಕಾರ್ಯಕ್ರಮವು ವಿನೂತನ ಪ್ರಯತ್ನವಾಗಿದ್ದು, ಇದು ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಹುಟ್ಟಿಸಲು ಸಹಕಾರಿಯಾಗಿದೆ ಎಂದರು.ಕಥೆಗಾರ ಬಸವರಾಜ ಗಣಪ್ಪನವರ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಉತ್ತಮ ಹವ್ಯಾಸ ಬೆಳೆಸಿಕೊಂಡು ಅಭ್ಯಾಸದೊಂದಿಗೆ ಸಾಂಸ್ಕೃತಿಕ ಪ್ರೀತಿ, ಪರಿಸರ ಕಾಳಜಿ, ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಬೇಕೆಂದು ತಿಳಿಸಿದರು.
ಈ ವೇಳೆ ನಿವೃತ್ತ ಶಿಕ್ಷಕ ಎಸ್.ಎಸ್. ಮಲ್ಲಾಪೂರ, ಬಿ.ಎಸ್. ಹಿಂಡಿ ಮಾತನಾಡಿದರು. ಆ ನಂತರ ನಡೆದ ಕವಿಗೋಷ್ಠಿಯಲ್ಲಿ ಶಿಕ್ಷಕಿ ಮ್ಯಾಗೇರಿ, ವಿ.ಎಂ. ಪವಾಡಿಗೌಡರ, ಬಸವರಾಜ ವಾರಿ, ಬಿ.ಎಸ್. ಹಿಂಡಿ, ಆನಂದ ಯತ್ನಳ್ಳಿ, ಬಿ.ವಿಶ್ವನಾಥ, ಆರ್.ಡಿ. ಕಪ್ಪಲಿ ಮುಂತಾದವರು ಕವನ ವಾಚಿಸಿದರು.ಪರಮ್ ಕೋಚಿಂಗ್ ವ್ಯವಸ್ಥಾಪಕ ಎಂ.ಎನ್. ಕುರಟ್ಟಿ, ಬೋಧಕಿ ಮಲ್ಲಮ್ಮ ಚಲುವನವರ, ಜಯಶ್ರೀ ಮೇರವಾಡೆ ಮುಂತಾದವರು ಇದ್ದರು. ಕವಿ ವಿ.ಎಂ. ಪವಾಡಿಗೌಡರ ಸ್ವಾಗತಿಸಿದರು. ನಜೀರ ಸಂಶಿ ವಂದಿಸಿದರು.
;Resize=(128,128))
;Resize=(128,128))