ವಿದ್ಯಾರ್ಥಿಗಳು ಸಂಸ್ಕಾರ, ಪ್ರತಿಭೆಯಿಂದ ವ್ಯಕ್ತಿತ್ವ ರೂಪಿಸಿಕೊಳ್ಳಿ: ಡಾ.ಎನ್.ಶಿವರಾಮರೆಡ್ಡಿ

| Published : Aug 08 2024, 01:32 AM IST

ವಿದ್ಯಾರ್ಥಿಗಳು ಸಂಸ್ಕಾರ, ಪ್ರತಿಭೆಯಿಂದ ವ್ಯಕ್ತಿತ್ವ ರೂಪಿಸಿಕೊಳ್ಳಿ: ಡಾ.ಎನ್.ಶಿವರಾಮರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಸದಾ ಕಠಿಣ ಅಭ್ಯಾಸ ಮಾಡಬೇಕು. ಗುರು- ಹಿರಿಯರನ್ನು ಗೌರವಿಸಬೇಕು, ಪುಸ್ತಕಗಳನ್ನು ಪ್ರೀತಿಸಬೇಕು. ಅಂದಾಗ ಸಾಧನೆ ಸುಲಭವಾಗುತ್ತದೆ. ಇಲ್ಲದಿದ್ದರೆ ಬದುಕು ಬಹಳ ಕಷ್ಟಕರವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಬಹಳ ಅವಶ್ಯಕ. ಇವೆರಡನ್ನು ನಿಮ್ಮ ಸಂಗಾತಿಗಳನ್ನಾಗಿ ಮಾಡಿಕೊಂಡರೆ ಭವಿಷ್ಯದಲ್ಲಿ ಸೋಲು ಸುಳಿಯುವುದಿಲ್ಲ .

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಶಿಸ್ತು, ಸಂಸ್ಕಾರ, ಪ್ರತಿಭೆ ಹಾಗೂ ಉತ್ತಮ ಆಶಯಗಳನ್ನು ತುಂಬಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಬಿಜಿಎಸ್ ಸಮೂಹ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರ ಹೊರವಲಯದ ಬಿಜಿಎಸ್ ಸಭಾಂಗಣದಲ್ಲಿ ಬಿಜಿಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಬಿಬಿಎ, ಬಿಕಾಂ ಪದವಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಶುಭಾರಂಭ್ - 2024 ರಲ್ಲಿ ಭಾಗವಹಿಸಿ ಮಾತನಾಡಿ, ಇಂದಿನ ಯುವಜನತೆ ಮೊಬೈಲ್ ಗೆ ಸೀಮಿತವಾಗಿದ್ದು, ಸಮಾಜದಲ್ಲಿನ ವಿಚಾರಗಳನ್ನು ಅರಿಯದೇ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ. ಮನಸ್ಸಿನ ಆಕರ್ಷಣೆಗಳು ತಾತ್ಕಾಲಿಕವಾಗಿದ್ದು, ಅವುಗಳ ಹಿಂದೆ ಹೋದವರು ಜೀವನದಲ್ಲಿ ನೊಂದಿರುವ ನಿದರ್ಶನಗಳು ಹೆಚ್ಚಾಗಿವೆ. ಕಾಲೇಜು ಜೀವನದಲ್ಲಿ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದದ್ದು. ಹೀಗಾಗಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಬೇಕೆಂದು ಸಲಹೆ ನೀಡಿದರು.

ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ ಆರ್ಶೀವಚನ ನೀಡಿ ಮಾತಮಾಡಿ, ವಿದ್ಯಾರ್ಥಿಗಳು ಸದಾ ಕಠಿಣ ಅಭ್ಯಾಸ ಮಾಡಬೇಕು. ಗುರು- ಹಿರಿಯರನ್ನು ಗೌರವಿಸಬೇಕು, ಪುಸ್ತಕಗಳನ್ನು ಪ್ರೀತಿಸಬೇಕು. ಅಂದಾಗ ಸಾಧನೆ ಸುಲಭವಾಗುತ್ತದೆ. ಇಲ್ಲದಿದ್ದರೆ ಬದುಕು ಬಹಳ ಕಷ್ಟಕರವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಬಹಳ ಅವಶ್ಯಕ. ಇವೆರಡನ್ನು ನಿಮ್ಮ ಸಂಗಾತಿಗಳನ್ನಾಗಿ ಮಾಡಿಕೊಂಡರೆ ಭವಿಷ್ಯದಲ್ಲಿ ಸೋಲು ಸುಳಿಯುವುದಿಲ್ಲ .ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್‌ ಗೀಳಿನಿಂದಾಗಿ ಹಾಳಾಗುತ್ತಿದ್ದಾರೆ. ಓದುವ ಸಮಯದಲ್ಲಿ ಮೊಬೈಲ್‌ ನಿಂದ ದೂರವಿರಿ. ತಂತ್ರಜ್ಞಾನಗಳನ್ನು ನಿಮ್ಮ ಜ್ಞಾನಕ್ಕೆ ಅನುಕೂಲವಾಗುವಂತೆ ಉಪಯೋಗಿಸಿಕೊಳ್ಳಿ. ಇಲ್ಲದಿದ್ದರೆ ಮೊಬೈಲ್‌ ನಿಮ್ಮ ಬದುಕನ್ನು ನಾಶ ಮಾಡುತ್ತದೆ ಎಂದು ಎಚ್ಚರಿಸಿದರು.

ವಿಷವಿರುವ ಚಿನ್ನದ ಪಾತ್ರೆಗಿಂತ ಹಾಲು ಇರುವ ಮಣ್ಣಿನ ಮಡಕೆ ಉತ್ತಮ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬಂದು ಉತ್ತಮ ಜೀವನವನ್ನು ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

ಸಂಸ್ಥೆಯ ಪ್ರಾಂಶುಪಾಲ ಡಾ.ಬಿ.ಆರ್.ವೆಂಕಟೇಶ್ ಬಾಬು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ, ವಿದ್ಯಾರ್ಥಿಗಳು ಮೊಬೈಲ್, ಅಂತರ್ಜಾಲ, ಟಿ.ವಿ. ಗಳಿಂದ ದೂರ ಇದ್ದು, ಒಳ್ಳೆಯ ಆಸಕ್ತಿ, ಆಲೋಚನೆ ಹಾಗೂ ಶ್ರದ್ಧಾ- ಭಕ್ತಿಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಿ ಭವ್ಯ ಭಾರತದ ಆಸ್ತಿಗಳಾಗುವಂತೆ ಕರೆಕೊಟ್ಟರು.

ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಸೂರ್ಯ ಫೈನಾನ್ಷಿಯಲ್ ಟೆಕ್ನಾಲಜಿ ಪ್ರೈ. ಲಿ.ನ ಬಿಸಿನೆಸ್ ಅನಾಲಿಸ್ಟ್ ಆರ್.ಸುಜಯ್ ,ಪ್ರೊಡಕ್ಷನ್ ಎಕ್ಸ್ ಪೆನ್ಸ್ ಆಡಿಟರ್ ಫಾಕ್ಸ್ ಕಾನ್ ಕಾಲೇಜಿನ ಪ್ರಾಂಶುಪಾಲರಾದ ಪಿ.ದೀಪಿಕಾ ರವರು ವಿದ್ಯಾರ್ಥಿಗಳನ್ನು ಕುರಿತು ಪದವಿ ಅವಧಿಯ ಮಹತ್ವ ಹಾಗೂ ಕಾಲೇಜು ಹೇಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಜೊತೆಗೆ ಅವರ ಯಶಸ್ಸಿಗಾಗಿ ಸಹಾಯಕವಾಗಿದೆ ಎಂಬ ವಿಚಾರದ ಬಗೆಗೆ ಮಾತನಾಡಿದರು. ಅಂತಿಮ ಬಿಬಿಎ, ಬಿಕಾಂ ಪದವಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವಾಗತ ನೃತ್ಯ ಮಾಡಿದ , ಅತ್ಯುತ್ತಮ ಸಂಸ್ಥೆಯಲ್ಲಿ ಕೆಲಸ ಪಡೆದ ಕಾಲೇಜಿನ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ಸಹನಾರಿಗೂ ಗಣ್ಯರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ವೃಂದದವರು, ವಿದ್ಯಾರ್ಥಿಗಳು,ಪೋಷಕರು ಇದ್ದರು.