ವಿದ್ಯಾರ್ಥಿಗಳು ಪರೀಕ್ಷೆ ಭಯದಿಂದ ಹೊರಬನ್ನಿ: ಪಂಪನಗೌಡ

| Published : Feb 21 2024, 02:03 AM IST

ವಿದ್ಯಾರ್ಥಿಗಳು ಪರೀಕ್ಷೆ ಭಯದಿಂದ ಹೊರಬನ್ನಿ: ಪಂಪನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆ ವಿದ್ಯಾರ್ಥಿಗಳು ನಾವು ಎಂಬ ಕೀಳರಿಮೆಯಿಂದ ಹೊರ ಬನ್ನಿ. ಹಾಗೆ ನೋಡಿದರೆ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ಸಿಗುತ್ತದೆ.

ಬಳ್ಳಾರಿ: ವಿದ್ಯಾರ್ಥಿಗಳು ಪರೀಕ್ಷೆ ಭಯದಿಂದ ಹೊರಬಂದು, ಹಬ್ಬದಂತೆ ಸಂಭ್ರಮಿಸಬೇಕು ಎಂದು ನಿವೃತ್ತ ಮುಖ್ಯಗುರು ಜೋಳದರಾಶಿ ಪಂಪನಗೌಡ ಸಲಹೆ ನೀಡಿದರು.

ತಾಲೂಕಿನ ಜೋಳದರಾಶಿಯ‌ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪೆಟ್ರೋಲ್ ಬಂಕ್‌ನ ಮಾಲೀಕ ತಿಮ್ಮಪ್ಪ ಜೋಳದರಾಶಿ ಅವರು ಹಮ್ಮಿಕೊಂಡಿದ್ದ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ಹಾಗೂ ಪೆನ್ನುಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆ ವಿದ್ಯಾರ್ಥಿಗಳು ನಾವು ಎಂಬ ಕೀಳರಿಮೆಯಿಂದ ಹೊರ ಬನ್ನಿ. ಹಾಗೆ ನೋಡಿದರೆ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಸರ್ಕಾರಿ ಶಾಲೆಯ ಶಿಕ್ಷಕರು ಹೆಚ್ಚು ಬುದ್ಧಿವಂತರು ಹಾಗೂ ವಿದ್ಯಾರ್ಥಿಗಳಿಗೆ ಪಠ್ಯವನ್ನು ಸುಲಲಿತವಾಗಿ ಕಲಿಸುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ ಎಂದರಲ್ಲದೆ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು, ಖಾಸಗಿ ಶಾಲೆಯ ವಿದ್ಯಾರ್ಥಿಗಳು ಪೈಪೋಟಿ ನೀಡಿ ಎಂದು ಸಲಹೆ ನೀಡಿದರು.

ಲಕ್ಷ್ಮಿ ವೆಂಕಟೇಶ್ವರ ಪೆಟ್ರೋಲ್ ಬಂಕ್ ಮಾಲೀಕ ತಿಮ್ಮಪ್ಪ ಜೋಳದರಾಶಿ ಮಾತನಾಡಿ, ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ‌‌ ಮಹನೀಯರು ಸರ್ಕಾರಿ ಶಾಲೆಗಳಲ್ಲಿ ಓದಿದವರಾಗಿದ್ದಾರೆ. ಓದುವ ಛಲ‌ ಹಾಗೂ ಏನಾದರೂ ಸಾಧಿಸಬೇಕು ಎಂಬ ಹಂಬಲ ಇದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಮುಖಂಡರಾದ ದುರುಗಪ್ಪ, ಜನಾರ್ದನ ನಾಯಕ, ಹೊನ್ನೂರಪ್ಪ, ಅಶೋಕ ಗೌಡ, ಭೀಮೇಶ್ ಸ್ವಾಮಿ, ಮನೋಜ್, ವಿನೋದ್, ದೇವೇಂದ್ರ, ಜೋಳದರಾಶಿ ಶೇಕ್ಷಾವಲಿ‌, ರೂಪನಗುಡಿ ನಾಗರಾಜ್, ಗೋವಿಂದ, ಹನುಮಂತಪ್ಪ, ಕುಂಟನಹಾಳ್ ದೊಡ್ಡಬಸವನಗೌಡ ಇತರರಿದ್ದರು.

ಚೇಳ್ಳಗುರ್ಕಿ, ರೂಪನಗುಡಿ, ಕುಂಟನಹಾಳು ಹಾಗೂ ಹಗರಿಫಾರ್ಮ್ ಸರ್ಕಾರಿ ಪ್ರೌಢಶಾಲೆಯ 500ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.