ಸಾರಾಂಶ
ಮಾತೃ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಸಕಲೇಶಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಾಸಕ ಸಿಮೆಂಟ್ ಮಂಜು ಗೌರವ । ಪ್ರತಿಭಾ ಪುರಸ್ಕಾರ
ಸಕಲೇಶಪುರ: ಮಾತೃ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಲಯನ್ಸ್ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಸಾಪದಿಂದ ಕನ್ನಡ ಭಾಷೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದವರಿಗೆ ಸನ್ಮಾನಿಸುವುದು ಒಂದು ಉತ್ತಮ ಕಾರ್ಯಕ್ರಮವಾಗಿದೆ. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಹೆಚ್ಚಾಗಿ ದಾಖಲು ಮಾಡುತ್ತಿದ್ದಾರೆ. ಈಗ ಆಂಗ್ಲ ಮಾಧ್ಯಮದಲ್ಲಿ ಮಾತನಾಡುವರು ಎಲ್ಲೆಡೆ ಕಾಣುತ್ತಾರೆ. ಹಲವು ದೇಶಗಳು ತಮ್ಮ ಮಾತೃಭಾಷೆಯನ್ನು ಮರೆತು ಇಂಗ್ಲಿಷ್ ಭಾಷೆಯನ್ನೆ ಅಧಿಕೃತ ಭಾಷೆಯನ್ನಾಗಿ ಮಾಡಿಕೊಂಡಿವೆ. ಈ ನಿಟ್ಟಿನಲ್ಲಿ ಕನ್ನಡಿಗರ ಮನಸ್ಥಿತಿ ಬದಲಾಗಿ ಕನ್ನಡವನ್ನೇ ಹೆಚ್ಚು ಬಳಸಲು ಮುಂದಾಗಬೇಕು. ನಾಡು ನುಡಿಯ ಉಳಿವಿಗೆ ಕಸಾಪ ನಿರಂತರವಾಗಿ ಶ್ರಮಿಸುತಿರುವುದು ಶ್ಲಾಘನೀಯ. ಅದರಲ್ಲೂ ತಾಲೂಕು ಕಸಾಪದಲ್ಲಿ ಸಾಹಿತ್ಯದ ಮೇಲೆ ಆಸಕ್ತಿ ಹೊಂದಿರುವರು ಪದಾಧಿಕಾರಿಗಳಾಗಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.ಕಸಾಪ ನಿಕಟ ಪೂರ್ವ ಅಧ್ಯಕ್ಷ ಜೈಭೀಮ್ ಮಂಜುನಾಥ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕಸಾಪ ತಾಲೂಕು ಘಟಕದಿಂದ ಪ್ರತಿ ವರ್ಷ ಸನ್ಮಾನ ಮಾಡಲಾಗುತ್ತಿದೆ. ಇದರಿಂದ ಕನ್ನಡ ಭಾಷೆಯ ಮೇಲೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಮೂಡಲು ಸಹಾಯಕವಾಗುತ್ತದೆ. ತಾಲೂಕಿನಲ್ಲಿ ಕಸಾಪ ನಿರಂತರವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ, ಕಸಾಪ ತಾಲೂಕು ಪದಾಧಿಕಾರಿಗಳಾದ ಯೋಗೇಶ್, ನಲ್ಲುಲ್ಲಿ ಸತೀಶ್, ಚನ್ನವೇಣಿ ಎಮ್ ಶೆಟ್ಟಿ, ನಿರ್ವಾಣಯ್ಯ, ಚೇತನ್, ದೊರೇಶ್, ಜಗದೀಶ್, ಗಿರೀಶ್ ಹಾಜರಿದ್ದರು.