ಸಾರಾಂಶ
ಹುಬ್ಬಳ್ಳಿ: ವಿದ್ಯಾರ್ಥಿಗಳು ದೇಶದ ಆರ್ಥಿಕ ಪ್ರಗತಿಗೆ ಕೈಜೋಡಿಸುವ ಮೂಲಕ ತಮ್ಮ ಜೀವನದಲ್ಲಿಯೂ ಪ್ರಗತಿಯನ್ನು ತಂದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯದ ಉಪಕುಲಪತಿ ಡಾ. ಸಿ. ಬಸವರಾಜ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ) 13ನೇ ಪದವಿ ಪ್ರಧಾನ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಜಾಗತಿಕ ಆರ್ಥಿಕತೆ ತೀವ್ರವಾಗಿ ಬೆಳೆಯುತ್ತಿದ್ದು, ಪದವೀಧರರು ಅದಕ್ಕೆ ಸ್ಪಂದಿಸಬೇಕು. ಅತ್ಯಾಧುನಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ತಿಳಿಸಿ, ಕೇಂದ್ರ ಸರ್ಕಾರದ ಸ್ಕೀಲ್ ಇಂಡಿಯಾ ಯೋಜನೆಯ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.
ಕರ್ನಾಟಕ ವಿವಿ ಪ್ರಭಾರಿ ಉಪಕುಲಪತಿ ಪ್ರೊ. ಎಸ್. ಜಯಶ್ರೀ ಮಾತನಾಡಿ, ವಿದ್ಯಾರ್ಥಿಗಳು, ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಬೇಕು ಮತ್ತು ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು ಎಂದರು.ಕರ್ನಾಟಕ ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ. ಸುರೇಶ ತುವಾರ, ಪ್ರೊ. ಎಸ್.ಎಸ್. ಬೆಂಚಳ್ಳಿ, ಪ್ರೊ. ವಿ.ಕೆ. ರೇವಣಕರ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಮಹಾಂತೇಶ ಎಂ ಸೇರಿದಂತೆ ಶೈಕ್ಷಣಿಕ ಡೀನ್ ಮತ್ತು ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಸಂಸ್ಥೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯ ಶಂಕರಣ್ಣ ಮುನವಳ್ಳಿ ನೇತೃತ್ವ ವಹಿಸಿದ್ದರು. ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ ಸ್ವಾಗತಿಸಿದರು. ಉಪನ್ಯಾಸಕಿ ಡಾ. ಸ್ನೇಹಾ ಚಿಂತಾ ಮತ್ತು ಸುನೇನಾ ಎಂ.ಎಂ. ನಿರೂಪಿಸಿದರು. ಮೇಘಾ ದೇಶಪಾಂಡೆ ನಿರೂಪಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವ ಮಾದರಿಯಲ್ಲಿ ಪದವಿ ಪ್ರಧಾನ ಸಮಾರಂಭ ಜರುಗಿತು. ಚೈತ್ರಾ ಸಲಗರ, ಪಿ. ವರ್ಷಾ, ಎ.ಎನ್. ಭಾಗ್ಯಶ್ರೀ, ಅಕ್ಷತಾ ಬಿ. ಹುಬ್ಬಳ್ಳಿ, ವಿದ್ಯಾ ಎಸ್. ಗುಂಜಟ್ಟಿ, ಕುಶಾಲ ಮುದೋಳಕರ ಬಂಗಾರದ ಪದಕಗಳನ್ನು ಪಡೆದುಕೊಂಡರು. ಬಿ.ಎಸ್ಸಿಯ 403, ಬಿ.ಸಿ.ಎ.ದಲ್ಲಿ 213, ಎಂ.ಎಸ್ಸಿ ಬಯೋಟೇಕ್ನಾಲಜಿ 16, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ 2, ಎಂ.ಎಸ್ಸಿ ಭೌತಶಾಸ್ತ್ರ 4, ಎಂ.ಎಸ್ಸಿ ರಸಾಯನಶಾಸ್ತ್ರ 30 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದುಕೊಂಡರು.