ಸೇವೆಯ ಕಡೆ ವಿದ್ಯಾರ್ಥಿಗಳ ಮನಸ್ಸು ಬದಲಿಸಬೇಕಿದೆ

| Published : Apr 16 2025, 12:31 AM IST

ಸಾರಾಂಶ

ಹಿರಿಯೂರು ತಾಲೂಕಿನ ಯರದಕಟ್ಟೆ ಗ್ರಾಮದಲ್ಲಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ 2024 -25 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರ ಆಯೋಜಿಸಲಾಗಿತ್ತು.

ಎನ್‌ಎಸ್‌ಎಸ್‌ ವಿಶೇಷ ವಾರ್ಷಿಕ ಶಿಬಿರದಲ್ಲಿ ಡಾ.ವಿ.ಬಸವರಾಜ ಹೇಳಿಕೆಕನ್ನಡಪ್ರಭ ವಾರ್ತೆ ಹಿರಿಯೂರು

ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನ ಮತ್ತು ಸೇವೆ ಒದಗಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ ಎಂದು ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಬಸವರಾಜ ಹೇಳಿದರು.

ತಾಲೂಕಿನ ಯರದಕಟ್ಟೆ ಗ್ರಾಮದಲ್ಲಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ 2024-25ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಯಂ ಪ್ರೇರಿತ ಸಮುದಾಯ ಸೇವೆ ಮೂಲಕ ವಿದ್ಯಾರ್ಥಿ ಯುವಕರ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕು. ಸೇವೆಯ ಕಡೆ ವಿದ್ಯಾರ್ಥಿಗಳ ಮನಸ್ಸುಗಳನ್ನು ಬದಲಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಇಂತಹ ವಿಶೇಷ ಶಿಬಿರಗಳ ಮುಖಾಂತರ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶದ ಜನರ ಜೀವನದ ಬದುಕಿನ ಒಡನಾಟದ ಚಿತ್ರಣವನ್ನು ನೇರವಾಗಿ ಕಂಡರಿಯುತ್ತಾರೆ. ಸಮುದಾಯದ ಸಮಸ್ಯೆಗಳ ಬಗ್ಗೆ ಅರಿವು ಮೂಡುತ್ತದೆ. ಮುಂದೊಂದು ದಿನ ಒಳ್ಳೆಯ ಸ್ಥಾನ ದೊರೆತಂತಹ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಸಾಮಾಜಿಕ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.

ಇಂದು ನಮ್ಮ ಸಮಾಜ ಸಾಮಾಜಿಕ ಸಮಸ್ಯೆಗಳಿಂದ ನಲುಗುತ್ತಿದೆ. ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾನೂನು, ನ್ಯಾಯಾಂಗ, ಕಾರ್ಯಾಂಗದಂತಹ ಉಪಾಯಗಳಿಗಿಂತ ಗಾಂಧಿ ಹೇಳಿದಂತಹ ರಚನಾತ್ಮಕ ಕಾರ್ಯಗಳನ್ನು ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಕೈಗೊಳ್ಳ ಬೇಕಾಗಿದೆ. ಆದ್ದರಿಂದಲೇ ಸ್ವಾತಂತ್ರ ಬಂದ ಕೂಡಲೇ ಗಾಂಧಿ ದೇಶದ ಯುವ ಜನತೆಗೆ ಹಳ್ಳಿಗಳಿಗೆ ಹಿಂದುರುಗಿ ಎಂದು ಕರೆ ಕೊಟ್ಟಿದ್ದು. ಈ ಹಿನ್ನೆಲೆಯಲ್ಲಿ ಹಳ್ಳಿಗಳ ಉದ್ಧಾರದ ನೆಲೆಯಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಊರಿನ ಕೊಳೆ ತೊಳೆಯುವುದಕ್ಕಿಂತ ಮಿಗಿಲಾಗಿ ಮನುಷ್ಯನ ಮನಸ್ಸಿನಲ್ಲಿರುವ ಕೊಳೆಯನ್ನು ನಾಶ ಮಾಡುವುದು ಬಹು ಮುಖ್ಯವಾಗಿದೆ.

ಜಾತಿಪದ್ಧತಿ, ಅರ್ಥವಿಲ್ಲದ ಸಂಪ್ರದಾಯಗಳು,ಮೌಡ್ಯತೆ, ಕಟ್ಟು ಕಟ್ಟಳೆಗಳಂತಹವುಗಳನ್ನು ಹೋಗಲಾಡಿಸಬೇಕಾದರೆ ಜನರ ಭಾವನೆಗಳನ್ನು ಬದಲಿಸಲು ವ್ಯವಸ್ಥಿತವಾಗಿ ನಿರಂತರ ಪ್ರಯತ್ನ ಮಾಡಬೇಕು ಎಂದರು.

ಆರೋಗ್ಯ ಶಿಕ್ಷಣ, ಕಾನೂನು ಅರಿವು, ಸಾಮಾಜಿಕ ಪಿಡುಗುಗಳು ಭ್ರಷ್ಟಾಚಾರ ನಿರ್ಮೂಲನೆ ಸ್ತ್ರೀ ಸಬಲೀಕರಣ ಮುಂತಾದ ವಿಷಯಗಳ ಬಗ್ಗೆ ಗ್ರಾಮದ ಜನರಿಗೆ ಮನವರಿಕೆ ಮಾಡಿಕೊಟ್ಟಾಗ ಗ್ರಾಮದ ಜನರಲ್ಲಿ ಜಾಗೃತಿ ಉಂಟಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಸಮುದಾಯವನ್ನು ಸಾಮರಸ್ಯದೆಡೆಗೆ ಕೊಂಡೊಯ್ಯಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಅಂಜನಮೂರ್ತಿ ಮಾತನಾಡಿ, ಪದವಿ ಕಾಲೇಜುಗಳಷ್ಟೇ ರಾಷ್ಟ್ರೀಯ ಸೇವಾ ಯೋಜನೆ ಶಿಬಿರವನ್ನು ಗ್ರಾಮಗಳಲ್ಲಿ ಹಮ್ಮಿಕೊಳ್ಳುತ್ತಿದ್ದವು. ಬಿ.ಇಡಿ ಕಾಲೇಜುಗಳಲ್ಲಿಯೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸ್ಥಾಪಿಸಿರುವುದು ಸಂತೋಷವಾಗಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಪಂಚಾಯಿತಿ ವ್ಯಾಪ್ತಿಯ ಯರದಕಟ್ಟೆ ಗ್ರಾಮದಲ್ಲಿ ಶಿಬಿರವನ್ನು ಹಮ್ಮಿಕೊಂಡಿರುವುದು ಖುಷಿ ತಂದಿದೆ. ವಿದ್ಯಾರ್ಥಿಗಳು ಗ್ರಾಮದಲ್ಲಿ ಅರಿವು ಮೂಡಿಸುವಂತಹ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡಲಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತುಕೊಟ್ಟು ಅಧ್ಯಯನಶೀಲರಾಗಿ ಎಂದು ಕರೆ ನೀಡಿದರು.

ಪ್ರಾಚಾರ್ಯ ಎನ್. ಧನಂಜಯ ಮಾತನಾಡಿ ಒಂದು ವಾರಗಳ ಕಾಲ ಗ್ರಾಮದ ಪ್ರಮುಖ ಬೀದಿಗಳ ಸ್ವಚ್ಛತೆ, ದೇವಸ್ಥಾನ ಆವರಣ ಸ್ವಚ್ಛತೆ, ಶಾಲೆಯ ಮೈದಾನದ ಸ್ವಚ್ಛತೆ ಹಾಗೂ ವಿಶೇಷವಾಗಿ ಆರೋಗ್ಯ ತಪಾಸಣೆ, ಕಾನೂನು ಅರಿವು, ಅಗ್ನಿ ಅನಾಹುತಗಳ ಬಗ್ಗೆ ಉಪನ್ಯಾಸ ಹಾಗೂ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಸಂದೇಶವನ್ನು ಸಾರುವಂತಹ ಕಿರು ನಾಟಕಗಳನ್ನ ಪ್ರಶಿಕ್ಷಣಾರ್ಥಿಗಳು ಅಭಿನಯಿಸುವುದರ ಮುಖಾಂತರ ಶಿಬಿರವನ್ನು ಯಶಸ್ವಿಗೊಳಿಸಲು ಕಾರ್ಯಯೋನ್ಮುಖ ರಾಗುತ್ತಾರೆ ಎಂದರು.

ಈ ವೇಳೆ ಶಿಬಿರದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಎಂ.ಬಸವರಾಜ, ಗ್ರಾಪಂ ಸದಸ್ಯರಾದ ಆರ್.ಮಂಜುನಾಥ, ಅನುಸೂಯಮ್ಮ ಗುರು ಕುಮಾರ್, ಶಕುಂತಲಾ ರಮೇಶ್, ಮಾಜಿ ಕಸಾಪ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಮುಖಂಡರಾದ ಗುರುಮೂರ್ತಿ, ಲೋಕೇಶ್, ರಂಗಕರ್ಮಿ ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ, ಪ್ರಸನ್ನಕುಮಾರ್, ಶಿಕ್ಷಕ ಸುರೇಂದ್ರನಾಥ್, ದಯಾನಂದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಅಜ್ಜಯ್ಯ, ಅಂಜಿನಪ್ಪ, ದೊರೇಶ್, ಗಿರೀಶ್, ನಾಗೇಶ್, ರವಿ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಸಾಮಾಜಿಕ ಸಂದೇಶ ಸಾರುವ ದೀಪ ಎನ್ನುವ ಕಿರು ನಾಟಕವನ್ನು ಪ್ರಶಿಕ್ಷಣಾರ್ಥಿಗಳು ಪ್ರದರ್ಶಿಸಿದರು.