ಇಂದಿನ ಯುಗದಲ್ಲಿ ಮಾರುಕಟ್ಟೆ ವ್ಯವಸ್ಥಿತ,ಹಣದ ಮೌಲ್ಯ,ಲಾಭ–ನಷ್ಟದ ಅರಿವು ಹಾಗೂ ಗ್ರಾಹಕರೊಂದಿಗೆ ವರ್ತಿಸುವ ಕೌಶಲ್ಯ ವಿದ್ಯಾರ್ಥಿ ದಿಶೆಯಿಂದಲೇ ಕಲಿಯಬೇಕು

ಹನುಮಸಾಗರ: ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜ್ಞಾನಕ್ಕೆ ಸೀಮಿತರಾಗದೇ ಜೀವನದಲ್ಲಿ ಉಪಯೋಗವಾಗುವ ವ್ಯವಹಾರಿಕ ಜ್ಞಾನ ಹೊಂದಬೇಕು.ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸ್ವಾವಲಂಬನೆ,ಆತ್ಮವಿಶ್ವಾಸ ಹಾಗೂ ಉದ್ಯಮಶೀಲತೆಯ ಗುಣ ಬೆಳೆಸುತ್ತವೆ ಎಂದು ಕಾಂಗ್ರೆಸ್ ಮುಖಂಡ ದೊಡ್ಡಬಸವ ಪಾಟೀಲ ಬಯ್ಯಾಪುರ ಹೇಳಿದರು.

ಗ್ರಾಮದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಮಾರುಕಟ್ಟೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ಯುಗದಲ್ಲಿ ಮಾರುಕಟ್ಟೆ ವ್ಯವಸ್ಥಿತ,ಹಣದ ಮೌಲ್ಯ,ಲಾಭ–ನಷ್ಟದ ಅರಿವು ಹಾಗೂ ಗ್ರಾಹಕರೊಂದಿಗೆ ವರ್ತಿಸುವ ಕೌಶಲ್ಯ ವಿದ್ಯಾರ್ಥಿ ದಿಶೆಯಿಂದಲೇ ಕಲಿಯಬೇಕು ಎಂದು ಸಲಹೆ ನೀಡಿದರು.

ಶಾಲೆಯ ಅಧ್ಯಕ್ಷ ಪ್ರವೀಣ ಗಡಾದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣವು ಮಕ್ಕಳನ್ನು ಬದುಕಿಗೆ ಸಿದ್ಧಗೊಳಿಸಬೇಕು ಎಂದು ಹೇಳಿದರು.

ಶಾಲೆಯ ಸಂಯೋಜಕಿ ಅಶ್ವಿನಿ ಗಡಾದ, ಸಂಸ್ಥೆಯ ನಿರ್ದೇಶಕ ವಿಶ್ವನಾಥ ಹುನಗುಂದ ಮಾತನಾಡಿ, ಇಂತಹ ಕಾರ್ಯಕ್ರಮ ಮಕ್ಕಳಲ್ಲಿನ ಸೃಜನಶೀಲತೆ ಮತ್ತು ನಾಯಕತ್ವ ಗುಣ ಹೊರ ತರುತ್ತವೆ ಎಂದರು.

ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳ ಮಾರುಕಟ್ಟೆಯಲ್ಲಿ ತರಕಾರಿ,ಫಾಸ್ಟ್‌ಫುಡ್, ಬಟ್ಟೆ,ತಿನಿಸು, ಸೌಂದರ್ಯವರ್ಧಕ ವಸ್ತುಗಳು ಸೇರಿದಂತೆ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ವಸ್ತುಗಳ ಅಂಗಡಿ ಮುಂಗಟ್ಟು ಸ್ಥಾಪಿಸಿ ವ್ಯಾಪಾರ ನಡೆಸಿದರು. ಸ್ವಯಂ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳು ಬೆಲೆ ನಿಗದಿ,ಗ್ರಾಹಕರನ್ನು ಆಕರ್ಷಿಸುವ ವಿಧಾನ ಹಾಗೂ ಲೆಕ್ಕಾಚಾರದ ಅನುಭವ ಪಡೆದುಕೊಂಡರು.

ವಿದ್ಯಾರ್ಥಿಗಳ ಚಟುವಟಿಕೆಗಳು ಪಾಲಕರು ಹಾಗೂ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ಪಡೆದವು.

ಪ್ರಶಾಂತ ಗಡಾದ, ಮಹಾಂತೇಶ ಅಗಸಿಮುಂದಿನ, ವಿಜಯಕುಮಾರ ಹಂಪನಗೌಡರ, ಮುತ್ತಣ್ಣ ಅಗಸಿಮುಂದಿನ, ಪ್ರಶಾಂತ ಕುಲಕರ್ಣಿ,ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.