ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ವಿದ್ಯಾರ್ಥಿಗಳು ಸದಾ ಸವಾಲನ್ನು ಎದುರಿಸುವ ಸಲುವಾಗಿ ಧೈರ‍್ಯವಂತರಾಗಿರಬೇಕು. ಜ್ಞಾನಾರ್ಜನೆ ಮಾಡುವುದು ಸುಲಭದ ಮಾತಲ್ಲ. ಸವಾಲುಗಳನ್ನು ಎದುರಿಸುತ್ತಾ ಮುನ್ನುಗ್ಗುವ ಛಾತಿಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಗೆ ವಿದ್ಯಾಭ್ಯಾಸ ಭಾರವೆನ್ನುವ ಸ್ಥಿತಿಯಿಂದ ಹೊರಬರಬೇಕಿದೆ. ವಿವೇಕವಿಲ್ಲದೆ ನಾವು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಬೆಂಗಳೂರಿನ ರಾಮಕೃಷ್ಣ ಮಠದ ವೀರೇಶಾನಂದ ಸ್ವಾಮೀಜಿ ಹೇಳಿದರು.ಅವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಸ್ಡಾಮಿ ವಿವೇಕಾನಂದ ಅಧ್ಯಯನ ಪೀಠ ಆಯೋಜಿಸಿದ ವಿವೇಕವಾಣಿಯ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸವಾಲು ಮತ್ತು ಪ್ರತಿಕೂಲತೆಗಳನ್ನು ಎದುರಿಸಲು ಸ್ಡಾಮಿ ವಿವೇಕಾನಂದರ ಸ್ಫೂರ್ತಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಹೇಳಿದರು.
ತನ್ನತನದ ಕುರಿತು ಯಾವಾಗಲೂ ಅಭಿಮಾನ ಇರಬೇಕೇ ಹೊರತು ಪ್ರತ್ಯೇಕತೆಯ ಭಾವ ಬರಬಾರದು. ದಿವ್ಯತೆಯ ಬೆಳಕೊಂದನ್ನು ಹೃದಯದಲ್ಲಿ ಮೂಡಿಸುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಸಜ್ಜಾಗಿರಬೇಕು. ಇವತ್ತಿನ ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ ವಿದ್ಯೆಯ ಅಗತ್ಯವಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್ ಎ. ಕೋಟ್ಯಾನ್ ಅವರು ವಿದ್ಯಾರ್ಥಿಗಳಿಗೆ ಈ ವಯಸ್ಸಲ್ಲಿ ಆಧ್ಯಾತ್ಮಿಕತೆಯ ಬೋಧನೆಗಳು ಅರಿವಿಗೆ ಬರದೇ ಇದ್ದರೂ ಭವಿಷ್ಯದಲ್ಲಿ ಅನುಕೂಲವಾಗಲಿದೆ. ಒತ್ತಡಗಳಿಲ್ಲದ ಶಿಕ್ಷಣ ಇವತ್ತು ಸಿಗುತ್ತಿಲ್ಲ. ಅದಕ್ಕಾಗಿ ಇಂತಹ ಮನಸ್ಸನ್ನು ಹಿಡಿದಿಡುವ ಆಧ್ಯಾತ್ಮಿಕತೆಯ ಭದ್ರ ಬುನಾದಿಯನ್ನು ಹಾಕುವ ಕೆಲಸ ವಿದ್ಯಾರ್ಥಿ ದೆಸೆಯಲ್ಲಿಯೇ ಆಗಬೇಕಿದೆ ಎಂದರು.ವೇದಿಕೆಯಲ್ಲಿ ಕಾರ್ಗಿಲ್ ಹೋರಾಟಗಾರರೂ, ಹಿರಿಯ ಸ್ವಯಂ ಸೇವಕರೂ ಆದ ಬೆಳ್ಳಾಳ ಗೋಪಿನಾಥ್ ರಾವ್ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಂಯೋಜಕರೂ ಅಗಿರುವ ನಾಗಭೂಷಣ ಎಚ್,ಜಿ ಉಪಸ್ಥಿತರಿದ್ದರು.ರಾಮಕೃಷ್ಣ ಮಿಷನ್ ಮಂಗಳೂರು ಇದರ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪಾಡಿ ಇವರು ಪ್ರಸ್ತಾವನೆಗೈದರು. ಸಂಸ್ಕೃತ ವಿಭಾಗ ಮುಖ್ಯಸ್ಥರಾದ ಡಾ. ಮಂಜುನಾಥ್ ಭಟ್ ವಂದಿಸಿ, ಕನ್ನಡ ವಿಭಾಗದ ಮುಖ್ಯಸ್ಥರಾದ ವನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.