ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಡಿಕೇರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ನಾಪೋಕ್ಲು ವಲಯ ಮತ್ತು ಅರುಣ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗ ಚೇರಂಬಾಣೆ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಮನಸ್ಸು ತುಂಬಾ ಚಂಚಲ. ಈ ಹಂತದಲ್ಲಿ ವಿದ್ಯಾರ್ಥಿಗಳು ಸ್ವ ನಿಗ್ರಹದೊಂದಿಗೆ ಮನಸು ಹತೋಟಿಗೆ ತಂದುಕೊಳ್ಳುವ ಅನಿವಾರ್ಯತೆ ಇದೆ ಎಂದು ಚೇರಂಬಾಣೆ ಅರುಣ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಎಸ್ ಸುಬ್ಬಯ್ಯ ಹೇಳಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಡಿಕೇರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ನಾಪೋಕ್ಲು ವಲಯ ಮತ್ತು ಅರುಣ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗ ಚೇರಂಬಾಣೆ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಶಿಬಿರಾಧಿಕಾರಿ ನಂದಕುಮಾರ್ ಮಾತನಾಡಿ, ಇದುವರೆಗೆ ರಾಜ್ಯದ 17,848 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ನಡೆಸಿ 21 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಜನಜಾಗೃತಿ ವೇದಿಕೆ ಮುಖೇನ ಸಮುದಾಯದ ಸಹಭಾಗಿತ್ವದೊಂದಿಗೆ ಇದುವರೆಗೆ 1903 ಮದ್ಯವರ್ಜನ ಶಿಬಿರಗಳನ್ನು ನಡೆಸಿ 1 ಲಕ್ಷದ 50 ಸಾವಿರ ಮಂದಿಯನ್ನು ವ್ಯಸನಮುಕ್ತಗೊಳಿಸಲಾಗಿದೆ ಎಂದರು.ವಿಶ್ವ ಆರೋಗ್ಯ ಸಂಸ್ಥೆಯ ಕಳೆ ಸಂಶೋಧನೆ ಪ್ರಕಾರ ದೇಶದಲ್ಲಿ ಒಂದು ವರ್ಷಕ್ಕೆ 5 ಲಕ್ಷ ಜನರು ಮದ್ಯಪಾನದಿಂದ ಮರಣ ಹೊಂದಿದರೆ 14.5 ಲಕ್ಷ ಜನರು ಮಾದಕ ದ್ರವ್ಯ, ಮಾದಕ ವ್ಯಸನ ಅಥವಾ ಇನ್ನಿತರ ಚಟಗಳಿಂದ ಬಲಿಯಾಗುತ್ತಿರುವುದು ಶೋಚನೀಯ ಎಂದರು.
ಅರುಣ ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕ ಲೋಕೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಪೋಕ್ಲು ವಲಯದ ಮೇಲ್ವಿಚಾರಕ ಸುನಿಲ್ ಇದ್ದರು.ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿ.ಯು ವಿಭಾಗದ 65 ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡರು.
ಪ್ರೌಢಶಾಲಾ ವಿಭಾಗದ ಶಿಕ್ಷಕ ರಮೇಶ್ ಸ್ವಾಗತಿಸಿ ನಿರೂಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನಾಪೋಕ್ಲು ವಲಯದ ಮೇಲ್ವಿಚಾರಕ ಸುನಿಲ್ ವಂದಿಸಿದರು.