ಸಾರಾಂಶ
ಕೊಪ್ಪಳ: ವಿದ್ಯಾರ್ಥಿಗಳು ಪಾಠ ಮತ್ತು ಕೌಶಲ್ಯ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳು ಹೊರ ಹೊಮ್ಮುವುದಕ್ಕೆ ಸಹಾಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಾಂಸ್ಕೃತಿಕ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ ಹವ್ಯಾಸ, ಸಂಸ್ಕೃತಿಯ ಸೌಜನ್ಯ ಮತ್ತು ಮಾನವೀಯತೆ ಬೆಳೆಸಿಕೊಳ್ಳಬೇಕು. ನಮ್ಮ ನಡೆ-ನುಡಿ ವ್ಯಕ್ತವಾಗುವುದೇ ಸಂಸ್ಕೃತಿ. ಪಂಪರಿಂದ ಕುವೆಂಪುವರೆಗೂ ಮಾನವ ಕುಲಂ ತಾನೊಂದೇ ವಲಂ ಎಂದು, ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದಾರೆ. ಸಕಲ ಜಾತಿಗಳು ಕೂಡಿ ಬಾಳುವುದೇ ಸಾಂಸ್ಕೃತಿಯಾಗಿದೆ. ಶಿಶುನಾಳು ಷರೀಫ್ ಸೇರಿದಂತೆ ಎಲ್ಲ ತತ್ವಪದಕಾರರು ಜಾತಿ ಭೇದ-ಭಾವ ಮಾಡಬಾರದು ಎಂದು ಹೇಳಿದ್ದಾರೆ. ಭಾರತದಲ್ಲಿ ವಿವಿಧ ರೀತಿಯ ಉಡುಗೆ-ತೊಡುಗೆ, ಆಹಾರ, ಆಚರಣೆ ಪದ್ಧತಿ ಇವೆ. ವಿದ್ಯಾರ್ಥಿಗಳು ಕೊಪ್ಪಳದ ಸಿದ್ದಯ್ಯ ಪುರಾಣಿಕ ಅವರ ವಿಚಾರ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.ಕೊಪ್ಪಳದ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯ ದೇಶ. ವಿದ್ಯಾರ್ಥಿಗಳು ತಂದೆ-ತಾಯಿಗಳ ಅಸೆ ಈಡೇರಿಸಬೇಕು. ಮಹಿಳೆಯರು ಚೆನ್ನಾಗಿ ಓದಬೇಕು. ಆಗ ಮಾತ್ರ ಮಹಿಳಾ ಸಬಲೀಕರಣ ಆಗುತ್ತದೆ. ಮಹಿಳೆಯರು ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಗಮ ಸಂಗೀತ, ಜಾನಪದ ಗೀತೆ, ಸಮೂಹ ನೃತ್ಯ, ಮೋಜಿನ ಗೊಂಬೆ ಮತ್ತು ನಂದಿ ಧ್ವಜ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಕಾಲೇಜಿನ ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಚಾನು ಪಾಷ ಕಿಲ್ಲೆದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್, ಪ್ರಾಧ್ಯಾಪಕಿ ಡಾ.ಹುಲಿಗೆಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಅಕಾಡೆಮಿಗಳ ಸದಸ್ಯರು, ಡಾ. ಸಿದ್ದಯ್ಯ ಪುರಾಣಿಕ ಟ್ರಸ್ಟ್ ನ ಸದಸ್ಯರು, ಕಾಲೇಜಿನ ಎಲ್ಲ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಿ.ವಿ ಜಡಿ ನಿರೂಪಿಸಿದರು. ಕರ್ಣಕುಮಾರ ಸ್ವಾಗತಿಸಿದರು.
;Resize=(128,128))
;Resize=(128,128))