ಸಾರಾಂಶ
ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ, ಪ್ರಾಯೋಗಿಕವಾಗಿ ತೋರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಮನದಟ್ಟು ಮಾಡಲು ಸಾಧ್ಯ
ಭಟ್ಕಳ: ತಾಲೂಕಿನ ಮುಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ ಮಕ್ಕಳು ಗದ್ದೆಗೆ ಇಳಿದು ಭತ್ತದ ಸಸಿ ನಾಟಿ ಮಾಡುವುದರ ಮೂಲಕ ಗಮನ ಸೆಳೆದರು.
ಸದಾ ಕಲಿಕೆಯಲ್ಲಿ ತೊಡಗುವ ಮಕ್ಕಳಿಗೆ ಗದ್ದೆ ಎಂದರೆ ಏನು? ಬೇಸಾಯ ಎಂದರೆ ಹೇಗೆ?, ನಾಟಿ ಹೇಗೆ ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಾಯಿತು.ಕೃಷಿಕ ವೆಂಕಟರಮಣ ನಾಯ್ಕ ಮಾತನಾಡಿ, ಮಕ್ಕಳು ಉತ್ಸುಕತೆಯಲ್ಲಿ ಪಾಲ್ಗೊಂಡಿದ್ದಾರೆ. ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ, ಪ್ರಾಯೋಗಿಕವಾಗಿ ತೋರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಮನದಟ್ಟು ಮಾಡಲು ಸಾಧ್ಯವಾಗುತ್ತದೆ. ಸ್ಥಳೀಯರ ಸಹಕಾರದಲ್ಲಿ ಮಕ್ಕಳಿಗೆ ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಕೃಷಿ ಶಿಕ್ಷಣ ನೀಡಲಾಯಿತು ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಗಂಗಾ ಮೊಗೇರ ಮಾತನಾಡಿ, ಪಠ್ಯದಲ್ಲಿರುವ ಕೃಷಿ ಚಟುವಟಿಕೆ ಪಾಠ ಮಾಡಬೇಕಿದ್ದ ಶಿಕ್ಷಕರು ವಿದ್ಯಾರ್ಥಿಗಳನ್ನು ನೇರವಾಗಿ ಭತ್ತದ ಗದ್ದೆಗೆ ಕರೆದೊಯ್ದು ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆ ತೋರಿಸಿದ್ದಾರೆ. ರೈತರ ಪರಿಶ್ರಮ ಅರಿತ ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಪಾಠ ಮಾಡುತ್ತಿರುವ ಸಂದರ್ಭದಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ತಮ್ಮಲ್ಲಿರುವ ಅನುಮಾನ ಬಗೆಹರಿಸಿಕೊಂಡರು ಎಂದರು.ಈ ಸಂದರ್ಭದಲ್ಲಿ ಮುಟ್ಟಳ್ಳಿ ಪಂಚಾಯತ್ ಅಧ್ಯಕ್ಷೆ ರಜನಿ ನಾಯ್ಕ,ಎಸ್ ಡಿ ಎಂ ಸಿ ಅಧ್ಯಕ್ಷ ಅನಂತ ನಾಯ್ಕ, ಎಸ್ ಡಿ ಎಂಸಿ ಉಪಾಧ್ಯಕ್ಷೆ ಶೈಲಾ ನಾಯ್ಕ, ಪಂಚಾಯತ್ ಮಾಜಿ ಅಧ್ಯಕ್ಷ ಶೇಷಗಿರಿ ನಾಯ್ಕ, ಶಾಲೆ ಶಿಕ್ಷಕರಾದ ಗಜಜಾನ ನಾಯ್ಕ, ವಿಜಯ ಕುಮಾರ, ಗ್ರಾಪಂ ಸಿಬ್ಬಂದಿಗಳು ಮುಂತಾದವರಿದ್ದರು.