ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ಹಾಗೂ ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ವರದರಾಜ್ ಮಾತನಾಡಿ, ಮತದಾರರ ಪಟ್ಟಿಯಿಂದ ಅನರ್ಹರ ಹೆಸರುಗಳನ್ನು ತೆಗೆದುಹಾಕಲು ಬಳಸುವ ಫಾರ್ಮ್-7 ಅನ್ನು ರಾಜಕೀಯ ಉದ್ದೇಶಕ್ಕೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.

ಬಳ್ಳಾರಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಫಾರ್ಮ್-7 ದುರುಪಯೋಗದ ಆರೋಪಗಳ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಎಡ ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಮೊದಲ ರೈಲ್ವೆ ಗೇಟ್ ಬಳಿಯ ಕ್ಲಾಕ್ ಟವರ್ ಸಮೀಪ ಎಸ್‌ಎಫ್‌ಐ, ಎಐಡಿಎಸ್‌ಒ, ಡಿವೈಎಫ್‌ಐ ಹಾಗೂ ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ಯುವಜನರು, ಎಸ್‌ಐಆರ್ ಪ್ರಕ್ರಿಯೆಯ ನೆಪದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ಹಾಗೂ ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ವರದರಾಜ್ ಮಾತನಾಡಿ, ಮತದಾರರ ಪಟ್ಟಿಯಿಂದ ಅನರ್ಹರ ಹೆಸರುಗಳನ್ನು ತೆಗೆದುಹಾಕಲು ಬಳಸುವ ಫಾರ್ಮ್-7 ಅನ್ನು ರಾಜಕೀಯ ಉದ್ದೇಶಕ್ಕೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಅರ್ಜಿದಾರರ ಗಮನಕ್ಕೂ ಬಾರದಂತೆ ಮುದ್ರಿತ ಫಾರ್ಮ್-7 ಬಳಸಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಅರ್ಜಿ ಸಲ್ಲಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಚುನಾವಣಾ ಆಯೋಗ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಡಿವೈಎಫ್‌ಐ ಜಿಲ್ಲಾಧ್ಯಕ್ಷ ಎರ್ರಿಸ್ವಾಮಿ, ಎಐಡಿವೈಒ ಜಿಲ್ಲಾಧ್ಯಕ್ಷ ಕೋಳೂರು ಪಂಪಾಪತಿ ಮಾತನಾಡಿ, ನಕಲಿ ಅರ್ಜಿಗಳು ಹಾಗೂ ತಂತ್ರಜ್ಞಾನದ ದುರುಪಯೋಗದ ಮೂಲಕ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂಬ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಫಾರ್ಮ್-7 ದುರುಪಯೋಗದಲ್ಲಿ ಭಾಗಿಯಾಗಿರುವ ರಾಜಕೀಯ ಮುಖಂಡರು ಹಾಗೂ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಕೆ. ಈರಣ್ಣ, ಖಜಾಂಚಿ ಅನುಪಮಾ, ಕಚೇರಿ ಕಾರ್ಯದರ್ಶಿ ನಿಹಾರಿಕ, ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬೈಲಾ ಹನುಮಂತಪ್ಪ, ಖಜಾಂಚಿ ಬಿ.ಪಿ. ನವೀನ್, ಕ್ರೀಡಾ ಘಟಕದ ಅಧ್ಯಕ್ಷ ಜಿ.ಎನ್. ಎರ್ರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಎಐಡಿವೈಒ ಸದಸ್ಯರಾದ ಈ.ಎಚ್. ಪ್ರಮೋದ್ ಭಾಗವಹಿಸಿದ್ದರು.