ಸಾರಾಂಶ
ಬಾದನಹಟ್ಟಿಗೆ ಬಸ್‌ಗಳು ತಡವಾಗಿ ಬರುತ್ತಿವೆ. ಹೀಗಾಗಿ ಗ್ರಾಮದಿಂದ 3 ಕಿಮೀ ದೂರವಿರುವ ಕುರುಗೋಡಿಗೆ ಕಾಲ್ನಡಿಗೆ ಮೂಲಕ ಬಂದು ಅಲ್ಲಿಂದ ಬಳ್ಳಾರಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುರುಗೋಡು: ಬಾದನಹಟ್ಟಿ ಗ್ರಾಮದಿಂದ ಬಳ್ಳಾರಿಗೆ ಬೆಳಗ್ಗೆ ತೆರಳುವ ಸಾರಿಗೆ ಬಸ್ ತಡವಾಗಿ ಬರುವುದನ್ನು ಖಂಡಿಸಿ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಆಗ್ರಹಿಸಿ ಬಾದನಹಟ್ಟಿ ಗ್ರಾಮದಲ್ಲಿ ಸೋಮವಾರ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ವಿದ್ಯಾರ್ಥಿ ಶಂಕರಗೌಡ, ಶಿವರಾಜ್, ಬಸವರಾಜ್ ಮಾತನಾಡಿ, ಬಾದನಹಟ್ಟಿಗ್ರಾಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ನಿತ್ಯ ಬಳ್ಳಾರಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದಾರೆ. ಆದ್ದರಿಂದ ಬೆಳಗ್ಗೆ 8ಕ್ಕೆ ಬಾದನಹಟ್ಟಿ ಗ್ರಾಮಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.ಬಾದನಹಟ್ಟಿಗೆ ಬಸ್‌ಗಳು ತಡವಾಗಿ ಬರುತ್ತಿವೆ. ಹೀಗಾಗಿ ಗ್ರಾಮದಿಂದ 3 ಕಿಮೀ ದೂರವಿರುವ ಕುರುಗೋಡಿಗೆ ಕಾಲ್ನಡಿಗೆ ಮೂಲಕ ಬಂದು ಅಲ್ಲಿಂದ ಬಳ್ಳಾರಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರಿಯಾಗಿ ಕಾಲೇಜಿಗೆ ಹಾಜರಾಗಲು ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಬಸ್ ಬಾರದೆ ಇದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅಲ್ಲದೆ ಕೃಷ್ಣನಗರ ಕ್ಯಾಂಪ್, ಸಿದ್ದಮ್ಮನಹಳ್ಳಿ, ಕುಡುತಿನಿ ಮಾರ್ಗಕ್ಕೆ ಬಸ್ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.ಸ್ಥಳಕ್ಕೆ ಸಾರಿಗೆ ಘಟಕದ ವ್ಯವಸ್ಥಾಪಕ ಹರಿಕೃಷ್ಣ ಭೇಟಿ ನೀಡಿ, ಘಟಕದಲ್ಲಿ ಬಸ್‌ಗಳ ಕೊರತೆ ಮತ್ತು ಸಿಬ್ಬಂದಿ ಸಮಸ್ಯೆಯಿಂದ ಬಸ್‌ಗಳು ಸರಿಯಾಗಿ ಓಡಾಡುವುದಕ್ಕೆಆಗಿಲ್ಲ. ಇನ್ಮುಂದೆ ಸರಿಯಾದ ಸಮಯಕ್ಕೆ ಬಸ್ ಬಿಡಲಾಗುವುದು ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕರಿಬಸವ, ಹೊನ್ನೂರ, ವೆಂಕಟೇಶ್, ಪ್ರದೀಪಕುಮಾರ್, ಅಂಜಲಿ, ಜಡೇಶ್, ನಾಗರಾಜ್, ಅಂಜಿನಿ, ನಂದಿನಿ, ಸಂದೀಪ್, ಗಣೇಶ್, ಸುರೇಶ, ಸೋಮಶೇಖರ್ ಇತರರು ಇದ್ದರು.