ರಾಜ್ಯದ ವಿವಿಧ ಇಲಾಖೆಯಲ್ಲಿರುವ ಸರ್ಕಾರಿ ಹುದ್ದೆ ಭರ್ತಿ ಹಾಗೂ ವಯೋಮಿತಿ ಸಡಿಲಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯು ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯು ಪೊಲೀಸ್‌ ಇಲಾಖೆಯಿಂದ ಪರವಾನಗಿ ಸಿಗದ ಹಿನ್ನೆಲೆಯಲ್ಲಿ ರದ್ದಾಯಿತು.

ಧಾರವಾಡ:

ರಾಜ್ಯದ ವಿವಿಧ ಇಲಾಖೆಯಲ್ಲಿರುವ ಸರ್ಕಾರಿ ಹುದ್ದೆ ಭರ್ತಿ ಹಾಗೂ ವಯೋಮಿತಿ ಸಡಿಲಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯು ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯು ಪೊಲೀಸ್‌ ಇಲಾಖೆಯಿಂದ ಪರವಾನಗಿ ಸಿಗದ ಹಿನ್ನೆಲೆಯಲ್ಲಿ ರದ್ದಾಯಿತು.

ಜನ ಸಾಮಾನ್ಯ ವೇದಿಕೆಯು ಹಲವು ಸಂಘಟನೆಗಳ ಜತೆಗೂಡಿ ಡಿ. 1ರಂದು ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆಗೂ ಪೊಲೀಸ್‌ ಇಲಾಖೆ ಪರವಾನಗಿ ನೀಡಿರಲಿಲ್ಲ. ಇಷ್ಟಾಗಿಯೂ ಪ್ರತಿಭಟನೆಗೆ ಮುಂದಾಗಿದ್ದ ವಿದ್ಯಾರ್ಥಿ ಮುಖಂಡರನ್ನು ಶ್ರೀನಗರ ವೃತ್ತದಲ್ಲಿ ಪೊಲೀಸರು ಬಂಧಿಸಿದ್ದರಿಂದ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಹತ್ತಿಕ್ಕಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಇದೀಗ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ ರಾಜ್ಯಾಧ್ಯಕ್ಷ ಕಾಂತಕುಮಾರ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನೆಗೆ ಪೊಲೀಸ್‌ ಇಲಾಖೆ ಪರವಾನಗಿ ನೀಡದ ಹಿನ್ನೆಲೆಯಲ್ಲಿ ಅದು ಸಹ ರದ್ದಾಗಿದ್ದು, ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ವಿರುದ್ಧ ವಿದ್ಯಾರ್ಥಿಗಳಲ್ಲಿ ತೀವ್ರ ಅಸಮಾಧಾನ ಮೂಡಿದೆ.

ವಿದ್ಯಾರ್ಥಿಗಳ ಕಣ್ಣೀರು:

ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ಜಯನಗರ ಬಳಿ ಪರಿಸ್ಥಿತಿ ಅರಿಯಲು ಬಂದಾಗ, ಅಲ್ಲಿದ್ದ ವಿದ್ಯಾರ್ಥಿಗಳು ಅವರ ಎದುರು ಕಣ್ಣೀರು ಹಾಕಿ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ಸರ್ಕಾರ ನೇಮಕಾತಿ ಮಾಡಿಲ್ಲ. ದೂರದ ಊರುಗಳಿಂದ ಕಲಿಯಲು ಬಂದು ಓದಿ ಓದಿ ಸುಸ್ತಾಗಿದ್ದೇವೆ. ಭವಿಷ್ಯದ ಬಗ್ಗೆ ಚಿಂತೆ ಕಾಡುತ್ತಿದೆ. ತಾವು ಸಹ ನಮ್ಮಂತೆ ಓದಿ ಐಪಿಎಸ್‌ ಮುಗಿಸಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಗೂ ಅವಕಾಶ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

600 ಪೊಲೀಸ್‌ ನಿಯೋಜನೆ:

ವಿದ್ಯಾರ್ಥಿಗಳು ಏಕಕಾಲಕ್ಕೆ ಪ್ರತಿಭಟನಾ ಸ್ಥಳದಲ್ಲಿ ಸೇರಬಹುದೆಂಬ ನಿರೀಕ್ಷೆಯಿಂದ 600 ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಹೋರಾಟ ರದ್ದಾದ ಹಿನ್ನೆಲೆಯಲ್ಲಿ ಬೆರಳೆಣಿಕೆ ವಿದ್ಯಾರ್ಥಿಗಳು ಮಾತ್ರ ಓಡಾಡುತ್ತಿದ್ದರು. ಇಷ್ಟಾಗಿಯೂ ಕರ್ನಾಟಕ ಕಾಲೇಜು ವೃತ್ತದಿಂದ ಸಪ್ತಾಪೂರ ಬಾವಿ, ಜಯನಗರ, ಲಿಂಗಾಯತ ಭವನ ಹಾಗೂ ಶ್ರೀನಗರ ವರೆಗೆ, ದಾಸನಕೊಪ್ಪ ವೃತ್ತ ಹಾಗೂ ಸುತ್ತಲೂ ಸೋಮವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 3ರ ವರೆಗೂ ರಸ್ತೆ ಬಂದ್‌ ಮಾಡಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಪ್ರತಿಭಟನೆ ಇಲ್ಲದೇ ಹೋದರೂ ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ಪೊಲೀಸರು ಸುಖಾಸುಮ್ಮನೆ ರಸ್ತೆ ಬಂದ್‌ ಮಾಡಿದ್ದು ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡಿತು. ಶಾಲಾ-ಕಾಲೇಜು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಿರುವ ಹಾಗೂ ಕಚೇರಿಗೆ ಹೋಗಿ ಬರುವ ಜನರಿಗೆ ರಸ್ತೆ ಬಂದ್‌ ಮಾಡಿದ ಪೊಲೀಸ್‌ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಸಹ ವ್ಯಕ್ತಪಡಿಸಿದರು.

ಹೋರಾಟಕ್ಕೆ ಹಕ್ಕಿಲ್ಲವೇ?

ಈ ಮಧ್ಯೆ, ಪೊಲೀಸ್‌ ಇಲಾಖೆಯು ಪ್ರತಿಭಟನಾ ಮೆರವಣಿಗೆಗೆ ಪರವಾನಗಿ ನೀಡದ ಹಿನ್ನೆಲೆಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಕಾಂತಕುಮಾರ ವೀಡಿಯೋ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿರುವ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಪರವಾಗಿ ಡಿ. 8ರಂದು ಹೋರಾಟ ಮಾಡಲು ನಾವು ಎಲ್ಲ ರೀತಿ ಸಿದ್ಧತೆ ಮಾಡಿಕೊಂಡಿದ್ದೇವು. ಇದಕ್ಕಾಗಿ ಪೊಲೀಸ್‌ ಇಲಾಖೆಗೆ ಪರವಾನಗಿ ಸಹ ಕೇಳಿದ್ದೇವು. ಇಲಾಖೆ ಕೇಳಿದ 12 ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ಸಹ ನೀಡಿದ್ದೆವು. ಇಷ್ಟಾಗಿಯೂ ಪರವಾನಗಿ ನೀಡಲಿಲ್ಲ. ಹೀಗಾದರೆ, ನಮ್ಮ ಸಮಸ್ಯೆಗಳನ್ನು ಯಾವ ರೀತಿ ಸರ್ಕಾರಕ್ಕೆ ತಲುಪಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಖಾಲಿ ಹುದ್ದೆಗಳ ನೇಮಕಾತಿಯಾಗಿಲ್ಲ. ಕೆಲವು ನೇಮಕಾತಿ ಪ್ರಕ್ರಿಯೆಗೆ ಕಾನೂನು ತೊಡಕುಗಳು ಉಂಟಾಗಿವೆ. ಈ ಬಗ್ಗೆ ಹೋರಾಟ ಮಾಡಲು ಇರುವ ಸಂವಿಧಾನ ಹಕ್ಕನ್ನು ರಾಜ್ಯ ಸರ್ಕಾರವು ಪೊಲೀಸ್‌ರ ಮೂಲಕ ಕಸಿದುಕೊಂಡಿದ್ದು ಬೇಸರ ಮೂಡಿಸಿದೆ ಎಂದರು.ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಪರವಾನಗಿ ನೀಡಿಲ್ಲ. ಜತೆಗೆ ವಿದ್ಯಾರ್ಥಿಗಳು ಪದೇ ಪದೇ ಹೋರಾಟ, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಹಲವು ಸಂಘಟನೆಗಳು ಪ್ರತಿಭಟನಾ ಮೆರವಣಿಗೆಗೆ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿವೆ.ಎನ್‌. ಶಶಿಕುಮಾರ, ಪೊಲೀಸ್‌ ಆಯುಕ್ತ

ಸಂವಿಧಾನದ ಆರ್ಟಿಕಲ್‌ 19ರ ಪ್ರಕಾರ ಶಿಕ್ಷಣ, ಹೋರಾಟ, ಸಂಘಟನೆಗೆ ಅವಕಾಶವಿದೆ. ಪ್ರಜಾಪ್ರಭುತ್ವದ ಈ ಹಕ್ಕನ್ನು ರಾಜ್ಯ ಸರ್ಕಾರ ಪೊಲೀಸ್‌ ಇಲಾಖೆ ಮೇಲೆ ಒತ್ತಡ ತರುವ ಮೂಲಕ ಕಸಿದುಕೊಂಡಿದೆ. ಪರವಾನಗಿ ಪಡೆಯದೇ ಹೋರಾಟ ಮಾಡುವುದು ತಪ್ಪಾಗಲಿದೆ ಎಂದು ಪರವಾನಗಿ ಪಡೆದುಕೊಂಡೇ ಹೋರಾಟ ಮಾಡಿಯೇ ತೀರುತ್ತೇವೆ.

ಕಾಂತಕುಮಾರ