ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್‌ಮುಕ್ತ ಪರಿಸರ ಜಾಗೃತಿ

| Published : Aug 09 2025, 12:00 AM IST

ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್‌ಮುಕ್ತ ಪರಿಸರ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಮತಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ನ್ಯಾಮತಿ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಪ್ಲಾಸ್ಟಿಕ್‌ಮುಕ್ತ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.

- ಮನೆಗಳಿಗೆ ತೆರಳಿ ಬಾಟಲಿ, ಕವರು, ತ್ಯಾಜ್ಯ ವಸ್ತುಗಳ ಸಂಗ್ರಹಿಸಿದ ಮಕ್ಕಳು

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ನ್ಯಾಮತಿ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಪ್ಲಾಸ್ಟಿಕ್‌ಮುಕ್ತ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.

ಕೋಡಿಕೊಪ್ಪ ರಸ್ತೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪಟ್ಟಣದ ಮನೆ ಮನೆಗೆ ಹೋಗಿ ಪ್ಲಾಸ್ಟಿಕ್‌ ಬಾಟಲ್‌, ಕವರ್‌, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಿಸುವಂತೆ ಪೋಷಕರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪರಿಸರ ಪ್ರೇಮಿ ಹಂಪಣ್ಣ ಮಾತನಾಡಿ ಅತಿಯಾದ ಪ್ಲಾಸ್ಟಿಕ್‌ ಬಳಕೆಯಿಂದ ಚರಂಡಿಗಳಲ್ಲಿ ನೀರು ಕಟ್ಟಿಕೊಂಡು ರಸ್ತೆ ಮೇಲೆ ಹರಿಯುವುದಲ್ಲದೇ ಸೊಳ್ಳೆಗಳ ತಾಣವಾಗುತ್ತದೆ. ಪ್ಲಾಸ್ಟಿಕ್‌ ಬಿಸಿಲಿಗೆ ಸಣ್ಣ ಚೂರುಗಳಾಗಿ ನಂತರ ಚರಂಡಿ, ಹಳ್ಳ, ನದಿಯಲ್ಲಿ ಹರಿದು ಹೋಗುವಾಗ ನೀರಿನ ರಭಸಕ್ಕೆ ಅತಿ ಸಣ್ಣ ಚೂರುಗಳಾಗಿ ಜಲಚರ ಪ್ರಾಣಿಗಳಿಗೆ ಕಂಟಕವಾಗುವುದು. ಸಮುದ್ರದ ಉಪ್ಪಿನಲ್ಲಿ ಸೇರಿ ಈ ಉಪ್ಪಿನ ಮೂಲಕ ಮತ್ತು ಬೆಳೆಗಳ ಮೂಲಕ ಮನುಷ್ಯನ ರಕ್ತದಲ್ಲಿ ಅತಿ ಸೂಕ್ಷ್ಮ ಪ್ಲಾಸ್ಟಿಕ್‌ ಕಣ ಸೇರಿಕೊಂಡು ಮನಷ್ಯನಿಗೆ ಅನೇಕ ಕಾಯಿಲೆಗಳು ಬರುತ್ತವೆ. ಆದ್ದರಿಂದ ಪ್ಲಾಸ್ಟಿಕ್‌ ಕವರ್‌ಗಳನ್ನು ಸರಿಯಾದ ರೀತಿಯಲ್ಲಿ ಬಳಸಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದರು.

ಪಟ್ಟಣದ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್‌ ರಾವ್‌ ಮಾತನಾಡಿ, ಪ್ಲಾಸ್ಟಿಕ್‌ನಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ಹಾನಿ ಆಗುತ್ತಿದೆ. ಹಸಿ, ಒಣಕಸ ಮತ್ತು ಪ್ಲಾಸ್ಟಿಕ್‌ ಕವರ್‌ ಬೇರೆಯಾಗಿ ನಮ್ಮ ಸ್ವಚ್ಛ ವಾಹಿನಿಗೆ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಬಗ್ಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿಗಳು ಮನೆ ಮನೆಗೆ ಹೋಗಿ ಸಂಗ್ರಹಿಸಿದ ಪ್ಲಾಸ್ಟಿಕ್‌ ಬಾಟಲ್‌, ಕವರ್‌ ಮತ್ತು ತ್ಯಾಜ್ಯ ವಸ್ತುಗಳನ್ನು ಪಟ್ಟಣದ ಪಂಚಾಯಿತಿ ಸ್ವಚ್ಚ ವಾಹಿನಿ ಸಿಬ್ಬಂದಿಗೆ ನೀಡಿದರು.

ಮುಖ್ಯ ಶಿಕ್ಷಕ ಕೆ.ಚಂದ್ರಾಚಾರ್‌, ಶಿಕ್ಷಕರಾದ ಮರುಳಸಿದ್ದಯ್ಯ, ವೆಂಕಟೇಶ್‌, ಪಟ್ಟಣ ಪಂಚಾಯಿತಿ ಸಿಬ್ಬಂದಿ ಮತ್ತಿತರರಿದ್ದರು.

- - -

-ಚಿತ್ರ.ಜೆಪಿಜಿ:

ನ್ಯಾಮತಿ ಪಟ್ಟಣದ ಕೋಡಿಕೊಪ್ಪ ರಸ್ತೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ಲಾಸ್ಟಿಕ್‌ ಮುಕ್ತ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.