ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ರಾತ್ರಿ ವೇಳೆ ವಿದ್ಯುತ್ ಇಲ್ಲದೆ ಗ್ರಾಮಗಳು ಕಗ್ಗತ್ತಲ್ಲಿನಲ್ಲಿ ಕೂಡಿವೆ. ಇದರಿಂದ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಓದಲು ತೊಂದರೆ ಆಗುತ್ತಿದ್ದು ರಾತ್ರಿ ವೇಳೆ ವಿದ್ಯುತ್ ಅನುವು ಮಾಡಿಕೊಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ರಸಾದ್ ಒತ್ತಾಯಿಸಿದರು.
ಹನೂರು ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ನಂತರ ಚೆಸ್ಕಾಂ ಅಧಿಕಾರಿಗಳಿಗೆ ರಾತ್ರಿ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.ರಾತ್ರಿ ವೇಳೆ ವಿದ್ಯುತ್ ನೀಡಲು ಗ್ರಾಮಗಳಿಗೆ ಸರ್ಕಾರದ ಆದೇಶವಿದೆ. ಆದರೂ ಚೆಸ್ಕಾಂ ಇಲಾಖೆ ನಿಯಮವನ್ನು ಗಾಳಿಗೆ ತೂರಿ ನಿಯಮಾನುಸಾರವಿಲ್ಲದೆ ರಾತ್ರಿ ವೇಳೆ ಶಾಗ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಲವಾರು ದಿನಗಳಿಂದ ರಾತ್ರಿ ವೇಳೆ ಕಗ್ಗತ್ತಲ್ಲಿನಲ್ಲಿ ಕಾಲ ಕಳೆಯುವಂತಾಗಿದೆ. ಹೀಗಾಗಿ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಸಮಸ್ಯೆ ಉಂಟಾಗಿರುವುದನ್ನು ಪರಿಗಣಿಸಬೇಕು. ಜೊತೆಗೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಆಗಿರುವುದರಿಂದ ಮಕ್ಕಳಿಗೆ ಓದಲು ಸಹ ಆಗುತ್ತಿಲ್ಲ. ಹೀಗಾಗಿ ಚೆಸ್ಕಾಂ ಇಲಾಖೆ ರಾತ್ರಿ ವೇಳೆ ಗ್ರಾಮಗಳಿಗೆ ವಿದ್ಯುತ್ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕಚೇರಿ ಮುಂಭಾಗ ಸಂಘ ಸಂಸ್ಥೆಗಳ ಹಾಗೂ ಭಾರತೀಯ ಕಿಸಾನ್ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಸರ್ಕಾರದ ವಿರುದ್ಧ ಹಾಗೂ ಚೆಸ್ಕಾಂ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಧಿಕಾರಿಗಳಿಗೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಇಇ ಶಂಕರ್ ಮಾತನಾಡಿ, ರಾತ್ರಿ ವೇಳೆ ಸರ್ಕಾರದ ನಿಯಮದಂತೆ ವಿದ್ಯುತ್ತನ್ನು ಗ್ರಾಮಗಳಿಗೆ ನೀಡಲಾಗುತ್ತಿದೆ. ಆದರೆ ರೈತರು ಸಿಂಗಲ್ ಫೇಸ್ 20 ಆಮ್ಸ್ ಮನೆಗಳಿಗಾಗಿ ವಿದ್ಯುತ್ ನೀಡಲಾಗುತ್ತಿದೆ. ಇದನ್ನು ರೈತರು ರಾತ್ರಿ ವೇಳೆ ಮೋಟಾರ್ ಚಾಲನೆ ಮಾಡುವುದರಿಂದ ವಿದ್ಯುತ್ ನಿಲುಗಡೆಗೊಳ್ಳುತ್ತಿದೆ ಹೀಗಾಗಿ ರೈತರು ತ್ರೀ ಫೇಸ್ ನಲ್ಲಿ ನೀಡುವ ವಿದ್ಯುತ್ತನ್ನು ಬಳಕೆ ಮಾಡಿಕೊಂಡು ರಾತ್ರಿ ವೇಳೆ ನೀಡುವ ವಿದ್ಯುತ್ತನ್ನು ಮನೆಗಳಿಗೆ ಮತ್ತು ತೋಟದ ಮನೆಗಳಿಗೆ ದೀಪಕ್ಕಾಗಿ ಬಳಸಿಕೊಂಡು ಅನುಕೂಲ ಮಾಡಿಕೊಳ್ಳಬೇಕು. ರಾತ್ರಿ ವೇಳೆ ಮೋಟಾರುಗಳನ್ನು ಚಾಲನೆ ಮಾಡದೆ ಚೆಸ್ಕಂ ಇಲಾಖೆಗೆ ಸಹಕಾರ ನೀಡಿದರೆ ವಿದ್ಯುತ್ ನೀಡಲು ಯಾವುದೇ ಸಮಸ್ಯೆ ಇರುವುದಿಲ್ಲ. ವಿದ್ಯುತ್ ನೀಡಿದಾಗ ರೈತರು ಮೋಟಾರ್ ಚಾಲನೆ ಮಾಡಿದಾಗ ಪವರ್ ಸ್ಟೇಷನ್‌ನಲ್ಲೆ ವಿದ್ಯುತ್ ಮೇಲುಗಡೆಗೊಳ್ಳಲಿದೆ. ಹೀಗಾಗಿ ಗ್ರಾಮಸ್ಥರು, ರೈತರು ಸಹಕಾರ ನೀಡಬೇಕು ಎಂದರು.ಇದೇ ಸಂದರ್ಭದಲ್ಲಿ ಎಇ ರಂಗಸ್ವಾಮಿ ಮಾತನಾಡಿ, ರೈತರು ತ್ರೀ ಫೇಸ್‌ನಲ್ಲಿ ವಿದ್ಯುತ್ ಬಳಕೆ ಮಾಡಿಕೊಂಡು ಸಿಂಗಲ್ ಫೇಸ್ ವಿದ್ಯುತ್ತನ್ನು ಮನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ಇಲಾಖೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ರೈತ ಮುಖಂಡರು ಹಾಗೂ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.