ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಲಿ: ಡಿವೈಎಸ್ಪಿ

| Published : Jun 29 2025, 01:32 AM IST

ಸಾರಾಂಶ

ವಿದ್ಯಾರ್ಥಿ-ಯುವಜನರು ಮಾದಕವಸ್ತುಗಳ ಬಗ್ಗೆ ಜಾಗೃತರಾಗಬೇಕು.

ಕನ್ನಡಪ್ರಭ ವಾರ್ತೆ ಸಿರುಗುಪ್ಪ

ವಿದ್ಯಾರ್ಥಿ-ಯುವಜನರು ಮಾದಕವಸ್ತುಗಳ ಬಗ್ಗೆ ಜಾಗೃತರಾಗಬೇಕು ಎಂದು ಸಿರುಗುಪ್ಪ ಉಪ ವಿಭಾಗದ ಡಿವೈಎಸ್ಪಿ ಸಂತೋಷ್ ಚೌಹಾಣ್ ಕರೆ ನೀಡಿದರು.

ಇಲ್ಲಿನ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಜರುಗಿದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾದಕ ವಸ್ತುಗಳ ಬಳಕೆಯಿಂದಾಗುವ ಅಪಾಯಗಳ ಕುರಿತು ವಿದ್ಯಾರ್ಥಿಗಳು ಅರಿವು ಹೊಂದಬೇಕು. ಯುವಸಮುದಾಯ ದೇಶದ ಶಕ್ತಿಯಾಗಿದ್ದು, ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಶೈಕ್ಷಣಿಕ ಪ್ರಗತಿ ಕಂಡುಕೊಂಡು ಗುರಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಸಾಮಾಜಿಕ ಜಾಲತಾಣದಿಂದ ನಡೆಯುವ ಆರ್ಥಿಕ ವಂಚನೆ ಮತ್ತು ಸೈಬರ್ ಕ್ರೈಂ ಅಪರಾಧಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ನಾನಾ ಕಾರಣಗಳಿಂದ ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ವ್ಯಸನ ಮತ್ತು ದುರುಪಯೋಗದ ಹಿಡಿತದಿಂದ ಜನರನ್ನು ರಕ್ಷಿಸಲು, ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಅರಿವು ಮೂಡಿಸುವ ದೃಷ್ಟಿಯಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.ಯಾವುದೇ ಅಪರಿಚಿತ ವ್ಯಕ್ತಿಗಳಿಂದ ಬರುವ ದೂರವಾಣಿ ಕರೆ ಹಾಗೂ ಮೆಸೇಜ್‌ಗಳಿಗೆ ಉತ್ತರಿಸಬಾರದು ಹಾಗೂ ಒಟಿಪಿ ನಂಬರ್ ಗಳನ್ನು ಹಂಚಿಕೊಳ್ಳಬಾರದು. ಇದರಿಂದ ಸೈಬರ್ ಕಳ್ಳರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ಲೂಟಿ ಮಾಡುತ್ತಾರೆ. ಸೈಬರ್ ಕ್ರೈಂ ಮೂಲಕ ನೀವು ಹಣವನ್ನು ಕಳೆದುಕೊಂಡಾಗ ಕೂಡಲೇ ಸಹಾಯವಾಣಿ ನಂಬರ್ 1930 ಅಥವಾ 112 ಕರೆ ಮಾಡಿ ದೂರನ್ನು ದಾಖಲಿಸಿ ಎಂದು ತಿಳಿಸಿದರು.

ಸಿರಗುಪ್ಪ ಠಾಣೆಯ ಪಿಎಸ್ಐ ಪರಶುರಾಮ, ಜ್ಞಾನಭಾರತಿ ಕಾಲೇಜಿನ ಪ್ರಾಂಶುಪಾಲ ಬಿ.ಹರೀಶ್, ಉಪನ್ಯಾಸಕ ಆರ್.ವೀರೇಶ, ವಿಕೆಜೆ ಕಾಲೇಜಿನ ಉಪನ್ಯಾಸಕರಾದ ರಂಗಣ್ಣ, ಗಂಗಾಧರ ಮತ್ತು ಹನುಮಂತಮ್ಮ, ಪಿಯು ಕಾಲೇಜಿನ ಉಪನ್ಯಾಸಕ ಸಕ್ರಪ್ಪ ಮತ್ತು ಪಟ್ಟಣದ ವಿವಿಧ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿದ್ದರು.