ಸುಭಾಷ್ ಬಿರಾದಾರ್ ಸಲಹೆ. ಸಂಪೂರ್ಣ ಕನ್ನಡಪ್ರಭ ವಿದ್ಯಾರ್ಥಿ ಮಿತ್ರ ಸಂಚಿಕೆ ವಿತರಣೆ
ಕನ್ನಡಪ್ರಭ ವಾರ್ತೆ ಕಮಲಾಪುರ
ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿ ಬಳಕೆಗೆ ಹೆಚ್ಚು ಸಮಯ ನೀಡದೆ, ಪ್ರತಿನಿತ್ಯ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಪ್ರಚಲಿತ ವಿದ್ಯಮಾನಗಳ ಕುರಿತು ಜ್ಞಾನ ಹೆಚ್ಚುವುದರ ಜತೆಗೆ, ಶೈಕ್ಷಣಿಕ ಸಾಧನೆಗೂ ಸಹಕಾರಿಯಾಗಲಿದೆ ಎಂದು ಕಮಲಾಪುರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸುಭಾಷ್ ಬಿರಾದಾರ್ ಹೇಳಿದರು.ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆ, ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಚಾಮುಂಡೇಶ್ವರಿ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ಉಚಿತವಾಗಿ ವಿತರಿಸಿ, ಅಂತಾರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಅವರು ಮಾತನಾಡಿದರು.
ಪುಸ್ತಕಗಳ ಓದಿನ ಜತೆಗೆ ದಿನಪತ್ರಿಕೆ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಪತ್ರಿಕೆಗಳು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸುತ್ತವೆ. ವಿಶೇಷವಾಗಿ ಕನ್ನಡಪ್ರಭ ಹೊರತರುತ್ತಿರುವ ವಿದ್ಯಾರ್ಥಿ ಮಿತ್ರ ಸಂಚಿಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರಕವಾದ ಶೈಕ್ಷಣಿಕ ಮಾಹಿತಿ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.*ಕ್ರೀಡೆಯೂ ಶಿಕ್ಷಣದಷ್ಟೇ ಮುಖ್ಯ:
ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಸದೃಢತೆ ಮಾತ್ರವಲ್ಲದೆ, ಮಾನಸಿಕ ಉತ್ಸಾಹ, ಆತ್ಮವಿಶ್ವಾಸ, ಶಿಸ್ತು ಹಾಗೂ ತಂಡ ಮನೋಭಾವ ಬೆಳೆಯುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ಕೇವಲ ಮನರಂಜನೆಯಲ್ಲ; ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖ ಸಾಧನವಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿನಿತ್ಯ ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಬಿರಾದಾರ್ ಹೇಳಿದರು.*150 ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ಮಿತ್ರ:
ಕಮಲಾಪುರದ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ 150 ಪ್ರತಿಗಳ ಕನ್ನಡಪ್ರಭ ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ಸುಭಾಷ್ ಬಿರಾದಾರ್ ಉಚಿತವಾಗಿ ಬಿಡುಗಡೆ ಮಾಡಿದರು. ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಶಾಲಾ ಅಧ್ಯಕ್ಷ ಜೀವನ್ ರೆಡ್ಡಿ ಅವರೊಂದಿಗೆ ಸಂಚಿಕೆ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಅಂಬಾದಾಸ, ಶಿಕ್ಷಕರಾದ ಸಂಗಪ್ಪ ಮರಕುಂದಿ, ದೈಹಿಕ ಶಿಕ್ಷಕ ದೇವೇಂದ್ರ ಕಟ್ಟಿಮನಿ, ಎಸ್‌ಡಿಎಂ ಶಿವಪ್ಪ ಕುಮಣ್ಣಿ, ಸೈಯದ್ ಪಾಟೇಲ್, ಮಂಗಳಾ, ಕೌಸರ್ ಜಹಾನ್, ಶೈಲಜಾ, ಪದ್ಮಜಾ, ನಾಗರತ್ನ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.