ಚಿಕ್ಕಮಗಳೂರುವಿದ್ಯಾರ್ಥಿದೆಸೆಯಿಂದ ಕಠಿಣ ಪರಿಶ್ರಮ, ನಿರಂತರ ಕಲಿಕೆ ಹಾಗೂ ವಿದ್ಯಾಭ್ಯಾಸದ ಕಡೆ ಒಲವು ಹೊಂದಿದ್ದರೆ ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲೇರಲು ಪ್ರೇರಣೆ ನೀಡಲಿವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು

- ಎಸ್‌ಎಸ್‌ಎಲ್‌ಸಿ - ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿದ್ಯಾರ್ಥಿದೆಸೆಯಿಂದ ಕಠಿಣ ಪರಿಶ್ರಮ, ನಿರಂತರ ಕಲಿಕೆ ಹಾಗೂ ವಿದ್ಯಾಭ್ಯಾಸದ ಕಡೆ ಒಲವು ಹೊಂದಿದ್ದರೆ ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲೇರಲು ಪ್ರೇರಣೆ ನೀಡಲಿವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಕರ್ನಾಟಕ ಪ್ರತಿಭಾ ಅಕಾಡೆಮಿ ಜಿಲ್ಲಾ ಘಟಕದಿಂದ ಆಯೋಜಿಸಿದ್ಧ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.ಪ್ರೌಢಶಾಲೆ ಮತ್ತು ಕಾಲೇಜು ಜೀವನದ ದಿಕ್ಕನ್ನು ಬದಲಿಸುವ ವಯಸ್ಸು. ಈ ಪ್ರಾಯದಲ್ಲಿ ಜಾಗರೂಕತೆಯಿಂದ ಹೆಜ್ಜೆಯಿಡ ಬೇಕು. ಪಾಲಕರು ಮತ್ತು ಗುರುವೃಂದ ವಿದ್ಯಾರ್ಥಿಗಳ ಆಸಕ್ತಿ ವಿಷಯವೆಂಬ ಗಿಡಕ್ಕೆ ನೀರುಣಿಸುವ ಕಾರ್ಯ ಮಾಡಿದರೆ ಆ ಮಕ್ಕಳು ಹೆಮ್ಮರವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದರು.ಪ್ರಸ್ತುತ ಅಕಾಡೆಮಿ ಜಿಲ್ಲೆಯ ಅಹಿಂದಾ ವರ್ಗದ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ. ಇದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತ್ಮಶಕ್ತಿ ತುಂಬಿಸುತ್ತದೆ. ಜೊತೆಗೆ ಪುರಸ್ಕಾರ ಪಡೆಯದ ಮಕ್ಕಳಿಗೆ ಪ್ರೇರಣೆಯಾಗಲಿದೆ. ಹೀಗಾಗಿ ಮುಂದಿನ ಪರೀಕ್ಷಾ ಹಂತದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.ವಿದ್ಯಾರ್ಥಿಗಳು ಜೀವನದಲ್ಲಿ ಮೊದಲು ಪಾಲಕರು, ಗುರುಹಿರಿಯರನ್ನು ಗೌರವಿಸಬೇಕು. ರಾಷ್ಟ್ರದ ಸತ್ಪ್ರಜೆಗಳಾಗಲು ಛಲ ಮತ್ತು ಗುರಿ ಹೊಂದಿರಬೇಕು. ಈ ಕಲಿಕೆಯ ಹಠ ಮತ್ತು ದೇಶದ ಮಹಾನೀಯರ ವಿಚಾರಧಾರೆ ಒಟ್ಟುಗೂಡಿದಾಗ ಯಶಸ್ಸು ವಿದ್ಯಾರ್ಥಿಗಳಿಗೆ ಕಟ್ಟಿಟ್ಟಬುತ್ತಿ ಎಂದು ಹೇಳಿದರು.ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಪಾಲಕರು ವಿದ್ಯೆ ಬೆಲೆಕಟ್ಟಲಾಗದ ಸಂಪತ್ತು. ಮಕ್ಕಳಿಗೆ ಆಸ್ತಿ, ಅಂತಸ್ತನ್ನು ಕೂಡಿಡದೇ, ದುಡಿದು ತಿನ್ನುವ ಪಾಠ ಬೋಧಿಸಬೇಕು. ಆಗ ಮಾತ್ರ ಸಮಾಜವನ್ನು ಆತ್ಮಸ್ಥೈರ್ಯದಿಂದ ಎದುರಿಸಲು ಸಾಧ್ಯ. ಇದರಿಂದ ಮಕ್ಕಳ ಊರಿಗೆ ಹಾಗೂ ನಾಡಿಗೆ ಕೀರ್ತಿ ತರಲಿದ್ದಾರೆ ಎಂದು ತಿಳಿಸಿದರು.ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಅಂಬೇಡ್ಕರ್ ಸಂವಿಧಾನದಿಂದ ಸಮಾಜ ವಿದ್ಯಾವಂತ ರಾಗುವ ಜೊತೆಗೆ ಪ್ರಭುಪ್ರಭುತ್ವಕ್ಕೆ ಅಡಿಪಾಯವಾಗಿದೆ. ಹೆಣ್ಣು ಮತ್ತು ಗಂಡಿಗೆ ಸರಿಸಮಾನ ಶಿಕ್ಷಣ ಪಡೆಯಲು ಅಂಬೇಡ್ಕರ್ ಮುಳ್ಳಿನ ಹಾದಿಯಲ್ಲಿ ಸಾಗಿ, ಭವಿಷ್ಯದ ಮಕ್ಕಳಿಗೆ ಹೂವಿನ ಹಾಸಿಗೆ ಮಾಡಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಮಾತನಾಡಿ, ಮಕ್ಕಳಲ್ಲಿ ಅಧ್ಯಯನಶೀಲತೆ ಕೂಡಿರಬೇಕು. ಅಂಬೇಡ್ಕರ್ ಮತ್ತು ಗಾಂಧೀಜೀಯವರ ಜೀವನ ಚರಿತ್ರೆ ಓದುವುದರಿಂದ ನಾಡಿನ ಸತ್ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ. ಹೀಗಾಗಿ ಹೆಚ್ಚು ಸಮಯ ಕಲಿಕೆಗೆ ನೀಡಬೇಕು ಎಂದು ಸಲಹೆ ಮಾಡಿದರು. ವಾಲ್ಮೀಕಿ ಸಂಘದ ಯುವ ಘಟಕದ ಅಧ್ಯಕ್ಷ ಜಗದೀಶ್ ಕೋಟೆ ಮಾತನಾಡಿ, ಪ್ರತಿಭಾ ಪುರಸ್ಕಾರ ಎನ್ನುವುದು ಸುಖಾ ಸುಮ್ಮನೆ ಲಭಿಸುವುದಿಲ್ಲ. ಕಲಿಕೆಯಲ್ಲಿ ಪರಿಶ್ರಮ ಇರುವವರಿಗೆ ಮಾತ್ರ ಲಭಿಸಲಿದೆ. ಆ ನಿಟ್ಟಿನಲ್ಲಿ ಇಂದು ಜಿಲ್ಲೆಯ ಪ್ರತಿ ತಾಲೂಕಿನಿಂದ ಮಕ್ಕಳನ್ನು ಗುರುತಿಸಿ ಅಕಾಡೆಮಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ವಿಚಾರ ಎಂದರು.ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಡಾ. ಸತೀಶ್‌ಕುಮಾರ್ ಮಾತನಾಡಿ, ಸಚಿವ ಜಾರಕಿಹೊಳೆ ನೇತೃತ್ವದಲ್ಲಿ ಪ್ರತಿಭಾ ಅಕಾಡೆಮಿ ರಾಜ್ಯಾದ್ಯಂತ ಸಂಚರಿಸಿ ಪುರಸ್ಕಾರ ಕಾರ್ಯಕ್ರಮ ನಡೆಸುತ್ತಿದೆ. ಈಗಾಗಲೇ ಒಟ್ಟು 15 ಜಿಲ್ಲೆಗಳನ್ನು ಪೂರೈಸಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆ ವಿದ್ಯಾರ್ಥಿಗಳನ್ನು ಗೌರವಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.ಇದೇ ವೇಳೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಅತಿ ಹೆಚ್ಚು ಅಂಕಗಳಿಸಿದ ಸುಮಾರು 200 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸಂತೋಷ್ ಉಪ್ಪಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್, ಛಲವಾದಿ ಮಹಸಭಾ ಜಿಲ್ಲಾಧ್ಯಕ್ಷ ರಘು, ಮಾದಿಗ ದಂಡೂರ ಸಂಘದ ಅಧ್ಯಕ್ಷ ರಮೇಶ್, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್, ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ರಾಕೇಶ್, ಶೃಂಗೇರಿ ಸಂಚಾಲಕ ಎ.ಸಿ.ಶ್ರೀನಿವಾಸ್, ಕಡೂರು ಸಂಚಾಲಕ ಕೆ.ಮೋಹನ್‌ ಕುಮಾರ್ ಉಪಸ್ಥಿತರಿದ್ದರು. 4 ಕೆಸಿಕೆಎಂ 1ಚಿಕ್ಕಮಗಳೂರಿನ ಡಾ. ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಕರ್ನಾಟಕ ಪ್ರತಿಭಾ ಅಕಾಡೆಮಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಸಕ ಎಚ್‌.ಡಿ. ತಮ್ಮಯ್ಯ, ರೇಖಾ ಹುಲಿಯಪ್ಪಗೌಡ, ಡಾ. ಸತೀಶ್‌ಕುಮಾರ್‌, ಜಗದೀಶ್‌ ಕೋಟೆ ಇದ್ದರು.