ಸಾರಾಂಶ
ಬಡತನ ಶಾಪವಲ್ಲ ಅದನ್ನು ವರವಾಗಿ ಪರಿವರ್ತಿಸಿಕೊಳ್ಳುವ ಇಚ್ಛಾಶಕ್ತಿ ವಿದ್ಯಾರ್ಥಿಗಳಿಗೆ ಅತೀ ಮುಖ್ಯವಾಗಿದ್ದು, ಕಠಿಣ ಪರಿಶ್ರಮ, ಸಮಯ ಪರಿಪಾಲನೆ, ನಿರ್ದಿಷ್ಟ ಗುರಿಯೊಂದಿಗೆ ಮುಂದೆ ಸಾಗಿ ಯಶಸ್ಸು ಪಡೆಯಿರಿ ಎಂದು ರಾಣಿಬೆನ್ನೂರಿನ ಎಸ್.ಜೆ.ಎಂ.ವಿ. ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ವಿ. ಕೋರಿ ತಿಳಿಸಿದರು.
ಹಾನಗಲ್ಲ: ಬಡತನ ಶಾಪವಲ್ಲ ಅದನ್ನು ವರವಾಗಿ ಪರಿವರ್ತಿಸಿಕೊಳ್ಳುವ ಇಚ್ಛಾಶಕ್ತಿ ವಿದ್ಯಾರ್ಥಿಗಳಿಗೆ ಅತೀ ಮುಖ್ಯವಾಗಿದ್ದು, ಕಠಿಣ ಪರಿಶ್ರಮ, ಸಮಯ ಪರಿಪಾಲನೆ, ನಿರ್ದಿಷ್ಟ ಗುರಿಯೊಂದಿಗೆ ಮುಂದೆ ಸಾಗಿ ಯಶಸ್ಸು ಪಡೆಯಿರಿ ಎಂದು ರಾಣಿಬೆನ್ನೂರಿನ ಎಸ್.ಜೆ.ಎಂ.ವಿ. ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ವಿ. ಕೋರಿ ತಿಳಿಸಿದರು.ಹಾನಗಲ್ಲ ತಾಲೂಕಿನ ತಿಳವಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಯ ಮನಸ್ಸು ಸಂತಸದೊಂದಿಗೆ ಸಾಧನೆಯತ್ತ ಸಾಗುತ್ತಿರಬೇಕು. ಯಾವುದೂ ಅಸಾಧ್ಯವಲ್ಲ. ಆದರೆ ಏನನ್ನು ಸಾಧಿಸಬೇಕು. ಅದಕ್ಕಾಗಿ ನನ್ನ ಪಾಲಿನ ಪರಿಶ್ರಮ ಎಷ್ಟು ಎಂಬ ನಿಲುವಿಗೆ ಬದ್ಧವಾಗಿರಬೇಕು. ನಾಳೆಗಾಗಿ ಇಂದೇ ಓದು ಜ್ಞಾನಾರ್ಜನೆ ಅತ್ಯಂತ ಮುಖ್ಯವಾದುದು. ಸಮಯ ಹೋದರೆ ಬಾರದು. ಇರುವುದನ್ನು ಸರಿಯಾಗಿ ಬಳಸಿಕೊಳ್ಳಲು ಮುಂದಾಗಿ ಎಂದು ಕರೆ ನೀಡಿದರು.
ಆನವಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಆರ್.ಸಿ. ಭೀಮಪ್ಪ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭೆಗೆ ಮೊದಲ ಆದ್ಯತೆ ಇದೆ. ನಾಳೆಗಳು ಅತ್ಯಂತ ಸ್ಪರ್ಧಾತ್ಮಕ ಎಂಬ ಅರಿವು ಬೇಕು. ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕು. ಛಲವಿದ್ದರೆ ಮಾತ್ರ ಯಶಸ್ಸಿಗೆ ಬಲ ಬರಬಲ್ಲದು. ಒಳ್ಳೆಯ ಒಡನಾಟ, ಒಳಿತಿನ ಚಿಂತನೆ ನಿಮ್ಮದಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪ್ರಾಚಾರ್ಯ ಡಾ.ಎಸ್.ಎಂ. ಸಿತಾಳದ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಈ ಕಾಲೇಜಿನಲ್ಲಿ ಅತ್ಯಂತ ಪ್ರತಿಭಾವಂತ ಮಕ್ಕಳಿದ್ದಾರೆ. ಅವರಿಗೆ ಸಾಧ್ಯವಾದ ಎಲ್ಲ ಶೈಕ್ಷಣಿಕ ಸೌಲಭ್ಯ ಒದಗಿಸಲು ಸಾಧ್ಯವಾಗಿದೆ. ಅವರಲ್ಲಿ ಸಾಹಿತ್ಯ, ಸಂಸ್ಕೃತಿಕ ಪ್ರತಿಭೆ ಅತ್ಯಂತ ಗಣನೀಯವಾಗಿದೆ. ಆದರೆ ಈ ಮಕ್ಕಳು ಕೀಳರಿಮೆಯಿಂದ ಹೊರ ಬಂದು ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಡಾ. ಲತಾ ಕೋಪರ್ಡೆ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಾದ ಶಾಂತಪ್ಪ ಲಮಾಣಿ, ನೀಲವ್ವ ಪೂಜಾರ, ಮಹೇಶ ಅಕ್ಕಿವಳ್ಳಿ, ಉಮೇಶ ಎಚ್., ಮಹೇಶ್ವರಪ್ಪ, ಉಮೇಶ ಕುಬಸದ, ಕಾಲೇಜು ಸಿಬ್ಬಂದಿ, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.