ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ವಿದ್ಯಾರ್ಥಿಗಳು ಕೇವಲ ಅಂಕಗಳ ಗಳಿಕೆಗೆ ಸೀಮಿತರಾಗದೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ರೂಢಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪೋಕ್ಸೋ ಅಪರಾಧಗಳ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಕೆ.ಎಂ.ಓಂಕಾರಮೂರ್ತಿ ತಿಳಿಸಿದರು.ನಗರದ ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ವಿಜ್ಞಾನ ವೇದಿಕೆ, ಎನ್‌ಸಿಸಿ, ಎನ್‌ಎಸ್‌ಎಸ್, ಇಕೋಕ್ಲಬ್, ಫಿಲ್ಮಿಕ್ಲಬ್, ಯುವ ರೆಡ್‌ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಶಿಸ್ತು ವಿದ್ಯಾರ್ಥಿಗಳು ಅಳವಡಿಸಿಕೊಂಡು ಪರಿಪೂರ್ಣತೆಯಿಂದ ಕೆಲಸ ಮಾಡಿದಾಗ ಮಾತ್ರ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಹಾಗೂ ನಿಮ್ಮ ಗುರಿಯನ್ನು ನೀವೇ ನಿರ್ಧರಿಸಿ. ಪ್ರತಿಯೊಬ್ಬರಿಗೂ ಒಂದು ಸೆಳೆತ ಇರುತ್ತದೆ. ಇದು ನಿಮ್ಮ ಉತ್ಸಾಹವಾಗಬೇಕು. ಪೋಕ್ಸೋ ಕಾಯ್ದೆ ಬಗ್ಗೆ ಮಾತನಾಡಿದ ನ್ಯಾಯಾಧೀಶರು, ಹದಿನೆಂಟು ವರ್ಷದೊಳಗಿನ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಜಾರಿಯಲ್ಲಿರುವ ಪೋಕ್ಸೋ ಕಾಯ್ದೆ ಬೇರೆ ಕಾಯ್ದೆ-ಕಾನೂನಿನಂತಲ್ಲ.ಇದು ಎಲ್ಲ ಕಾಯ್ದೆಗಳಿಗಿಂತ ಅತ್ಯಂತ ಕಠಿಣ. ಈ ಕಾಯ್ದೆಯಡಿ ಅಪರಾಧ ಸಾಬೀತಾದರೆ ಕನಿಷ್ಠ 20 ವರ್ಷ ಅದಕ್ಕೂ ಮೇಲ್ಪಟ್ಟು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದರಲ್ಲಿ ಭಾಗಿಯಾದವರೂ, ವಿಷಯ ಗೊತ್ತಿದ್ದೂ ಮುಚ್ಚಿಟ್ಟ ಎಲ್ಲ ವ್ಯಕ್ತಿಗಳೂ ತಪ್ಪಿತಸ್ಥರಾಗುತ್ತಾರೆ. ಆದ್ದರಿಂದ ಕಾಲೇಜು ವಿದ್ಯಾರ್ಥಿಗಳು ಈ ವಿಚಾರದಲ್ಲಿ ಎಚ್ಚರದಿಂದಿರಿ. ಯಾವುದೇ ತಪ್ಪುಗಳನ್ನು ಮಾಡಬೇಡಿ, ಬೇರೆಯವರನ್ನೂ ಎಚ್ಚರಿಸಿ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜಿ.ಪಿ.ದೀಪಕ್ ಮಾತನಾಡಿ, ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಕೆ.ಎಂ.ಓಂಕಾರಮೂರ್ತಿಯವರು ನಮ್ಮ ಕಾಲೇಜಿನಲ್ಲಿಯೇ ಓದಿದವರು. ವಿಜ್ಞಾನದಲ್ಲಿ ಓದಿದರೂ ಕಾನೂನು ಅಭ್ಯಾಸ ಮಾಡಿ ಇಂದು ನ್ಯಾಯಾಧೀಶರಾಗಿದ್ದಾರೆ. ಅವರನ್ನು ನಿಮ್ಮ ರೋಲ್‌ಮಾಡಲ್ ಆಗಿನೋಡಿ. ನೀವು ಅವರಂತೆಯೇ ಕಠಿಣ ಪರಿಶ್ರಮ ಹಾಕಿ ಸಾಧನೆ ಮಾಡಿ ದೊಡ್ಡ ಅಧಿಕಾರಿಗಳಾಗಿ ಇದೇ ಕಾಲೇಜಿಗೆ ಅತಿಥಿಗಳಾಗಿ ಬರಬೇಕು. ಆಗ ನಮ್ಮ ಸಂಸ್ಥೆಯ ಪ್ರಯತ್ನಕ್ಕೆ ಅರ್ಥ ಬರುತ್ತದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಎಚ್.ಜಿ.ಸುಧಾಕರ್ ಮಾತನಾಡಿ, ಕಲ್ಪತರು ಕಾಲೇಜು ಸ್ಥಾಪನೆಯಾಗಿ 62 ವರ್ಷಗಳಾಗಿ ಜಿಲ್ಲೆಯಲ್ಲಿಯೇ ಅತ್ಯಂತ ಪ್ರತಿಷ್ಠಿತ ಕಾಲೇಜು ಎನಿಸಿದೆ. ಇದರ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆಯ ವತಿಯಿಂದ ಎಲ್ಲ ಬೆಂಬಲ ನೀಡಲಾಗುತ್ತಿದೆ. ಬಿಎಸ್ಸಿ, ಎಂಬಿಎ ಕೋರ್ಸ್ ಪಡೆಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಪ್ಲೇಸ್‌ಮೆಂಟ್ ಸೆಲ್ ಕೂಡ ಪ್ರಾರಂಭಿಸಲಾಗಿದ್ದು, ಅನೇಕ ಕಂಪನಿಗಳು ಇಲ್ಲಿನ ವಿದ್ಯಾರ್ಥಿಗಳನ್ನು ಕೆಲಸಕ್ಕೆ ನೇರವಾಗಿ ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಚಿತ್ತರಂಜನ್ ರೈ ಕಾಲೇಜಿನ ವಾರ್ಷಿಕ ಚಟುವಟಿಕೆಗಳ ವರದಿ ಓದಿದರು. ಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಕಾರ್ಯದರ್ಶಿ ಟಿ.ಯು. ಜಗದೀಶ್‌ಮೂರ್ತಿ, ಕೆಐಟಿ ಪ್ರಾಧ್ಯಾಪಕ ರಾಜಶೇಖರ್ ಮತ್ತಿತರರಿದ್ದರು.ಫೋಟೋ 1-ಟಿಪಿಟಿ4ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರಿನ ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾಚಟುವಟಿಕೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಪೋಕ್ಸೋ ಅಪರಾಧಗಳ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಕೆ.ಎಂ. ಓಂಕಾರಮೂರ್ತಿ ಉದ್ಘಾಟಿಸಿದರು.