ಆಧುನಿಕ ಯುಗದಲ್ಲಿ ಡಿಜಿಟಲ್ ತಂತ್ರಜ್ಞಾನವು ಕೇವಲ ಮನರಂಜನೆ ಸಾಧನವಲ್ಲ. ಅದು ಜ್ಞಾನ ಭಂಡಾರವಾಗಿದೆ. ಯಾವುದೇ ಮಾಹಿತಿ ಬೇಕಿದ್ದರೂ ಕ್ಷಣದಲ್ಲಿಯೇ ತಿಳಿದುಕೊಳ್ಳಬೇಕಿದೆ. ಸಾಮಾಜಿಕ ಜಾಲತಾಣವನ್ನು ಆಗತ್ಯ ತಕ್ಕಂತೆ ಕಲಿಕೆಗೆ ಉಪಯೋಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿದ್ಯಾರ್ಥಿಗಳು ಬಾಲ್ಯದಿಂದಲೇ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ತಾಲೂಕಿನ ತಳಗವಾದಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಆವರಣದಲ್ಲಿ ನಡೆದ ಹಿರಿಯರ ಚಿಂತನೆ-ಕಿರಿಯರ ಭವಿಷ್ಯ ಹಾಗೂ ಎಐ ಯುಗದಲ್ಲಿ ವಿದ್ಯಾರ್ಥಿಗಳ ಭವಿಷ್ಯ-ಅವಕಾಶಗಳು, ಅಪಾಯಗಳು ಹಾಗೂ ನಮ್ಮ ಜವಾಬ್ದಾರಿ ಎಂಬ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಡಿಜಿಟಲ್ ತಂತ್ರಜ್ಞಾನವು ಕೇವಲ ಮನರಂಜನೆ ಸಾಧನವಲ್ಲ. ಅದು ಜ್ಞಾನ ಭಂಡಾರವಾಗಿದೆ. ಯಾವುದೇ ಮಾಹಿತಿ ಬೇಕಿದ್ದರೂ ಕ್ಷಣದಲ್ಲಿಯೇ ತಿಳಿದುಕೊಳ್ಳಬೇಕಿದೆ. ಸಾಮಾಜಿಕ ಜಾಲತಾಣವನ್ನು ಆಗತ್ಯ ತಕ್ಕಂತೆ ಕಲಿಕೆಗೆ ಉಪಯೋಗಿಸಿಕೊಳ್ಳಬೇಕು ಎಂದರು.

ತಂತ್ರಜ್ಞಾನದಿಂದ ಅಪಾಯಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಪಾಲಿಸುವ ಮೂಲಕ ಸಾಧನೆಯ ಗುರಿಯನ್ನು, ಮಹತ್ವಕಾಂಕ್ಷೆಯ ಕನಸನ್ನು ನನಸು ಮಾಡಿಕೊಳ್ಳಬಹುದು. ಗಣಿತ ಮತ್ತು ವಿಜ್ಞಾನದ ಕಠಿಣ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರ ನೆರವು ಪಡೆಯಬೇಕು ಎಂದರು.

ಶಾಲಾ-ಕಾಲೇಜುಗಳ ಸಾಂಸ್ಕೃತಿಕ, ಕ್ರೀಡಾ ಅಥವಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಆದರ್ಶ ಗುಣದೊಂದಿಗೆ ನಾಯಕರಾಗಿ ಸಮಸ್ಯೆಗಳು ಎದುರಾದಾಗ ಪರಿಹಾರ ಕಂಡುಕೊಳ್ಳುತ್ತ ಚಿಂತನೆ ನಡೆಸಬೇಕು. ಸಮಾಜದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕರಿಂದ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಕುಮಾರ ಅವರು ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿದ್ದ ತಹಸೀಲ್ದಾರ್ ಅವರಿಂದ ಪರಿಹಾರ ಸೂಚಿಸಿದರು. ರೈತರ ಮನವಿ ಮೇರೆಗೆ ಕೆಲವೆಡೆ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿಯಾಗಿರುವ ಸರ್ಕಾರಿ ಹಳ್ಳ, ರಸ್ತೆಗಳನ್ನು ಕೂಡಲೇ ತೆರವು ಮಾಡಬೇಕು. ಯಾವುದೇ ಒತ್ತಡಕ್ಕೆ ಒಳಗಾಗದೇ ತ್ವರಿತವಾಗಿ ಕ್ರಮ ವಹಿಸಬೇಕು ಎಂದು ತಹಸೀಲ್ದಾರ್ ಡಾ. ಎಸ್.ವಿ.ಲೋಕೇಶ್ ಅವರಿಗೆ ಸೂಚನೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪ್ರಾಂಶುಪಾಲ, ಉಪಪ್ರಾಂಶುಪಾಲ, ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.