ಧಾರವಾಡ: ಅವಸರ್ ಫೌಂಡೇಶನ್ ಟ್ರಸ್ಟ್ ಆರ್ಥಿಕ ಸಹಾಯದಲ್ಲಿ ನೀಡಲಾಗಿರುವ ಸ್ಮಾರ್ಟ್ ಬೋರ್ಡ್ ಸೌಲಭ್ಯ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಲು ಕವಿವಿಯ ಕುಲಪತಿ ಪ್ರೊ. ಎ. ಎಂ. ಖಾನ್‌ ಹೇಳಿದರು.

ಕವಿವಿ ಉನ್ನತ ಭಾರತ ಅಭಿಯಾನ ಕೋಶ, ಕವಿವಿ ಪಬ್ಲಿಕ್ ಶಾಲೆ ಬೆಂಗಳೂರಿನ ಅವಸರ ಫೌಂಡೇಶನ್ ಅವರ ₹30 ಲಕ್ಷ ವೆಚ್ಚದಲ್ಲಿ ನವೀಕೃತ ವರ್ಗಕೋಣೆಗಳು ಹಾಗೂ ಸ್ಮಾರ್ಟ್‌ ಬೋರ್ಡ್ ಹಸ್ತಾಂತರ ಕಾರ್ಯಕ್ರಮ ಹಾಗೂ ದತ್ತು ಗ್ರಾಮಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ವಿತರಣೆಯಲ್ಲಿ ಮಾತನಾಡಿದರು.

ಅವಸರ ಫೌಂಡೇಶನ್ ಕರ್ನಾಟಕ ವಿವಿಗೆ ಉದಾರವಾಗಿ ಹಣಕಾಸಿನ ನೆರವು ನೀಡಿದ್ದು, ಅವರ ಸೇವೆ ಸದಾ ಸ್ಮರಣೀಯ. ನವೀಕರಣಗೊಂಡ ನಂತರ ಶಾಲೆಗೆ ಮೆರುಗು ಬಂದಿದೆ ಎಂದರು.

ಅವಸರ್ ಫೌಂಡೇಶನ್‌ ಸಂಸ್ಥಾಪಕ ಆನಂದ ಚತುರ್ವೇದಿ ಮಾತನಾಡಿ, ಹದಿನಾಲ್ಕು ವರ್ಷಗಳಿಂದ ಶಾಲೆಯ ಅಭಿವೃದ್ಧಿಯ ಕಾರ್ಯಗಳನ್ನು ಮಾಡುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕೃತಜ್ಞತೆಯ ಮನೋಭಾವ ಕಳೆದು ಹೋಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡರ ಮಾತನಾಡಿ, ಒಂದು ರೂಪಾಯಿ ಖರ್ಚು ಮಾಡಲು ಹಿಂದೆ ಮುಂದೆ ನೋಡುವ ಈಗಿನ ಕಾಲದಲ್ಲಿ ಈ ಶಾಲೆಗೆ ₹30 ಲಕ್ಷ ಖರ್ಚು ಮಾಡಿರುವ ಅವಸರ್ ಫೌಂಡೇಶನ್‌ ಕಾರ್ಯ ಶ್ಲಾಘನೀಯ ಎಂದರು. ದತ್ತು ಗ್ರಾಮಗಳ 13 ಜನ ವಿದ್ಯಾರ್ಥಿನಿಯರಿಗೆ ತಲಾ ಹತ್ತು ಸಾವಿರ ಶಿಷ್ಯವೇತನ ಚೆಕ್ ವಿತರಿಸಲಾಯಿತು.


ಪ್ರೊ. ತ್ರಿವೇಣಿ ಎಸ್., ಸಂಯೋಜಕ ಡಾ. ಚೇತನ್ ಜೆ.ಡಿ. ಹಾಗೂ ಪ್ರೊ. ಜೆ.ಎಂ. ಚೆಂದುನವರ, ಪ್ರೊ. ಸಂಗೀತಾ ಮಾನೆ, ಪ್ರೊ. ಎನ್. ರಾಮಾಂಜನೇಯಲು, ಗಿರೀಶ ಜೋಶಿ ಮಾತನಾಡಿದರು. ಅನಸೂಯಾ ನಾಯಕ ಸ್ವಾಗತಿಸಿದರು. ಎಂ.ಎಸ್. ಹಿರೇಮಠ ವಂದಿಸಿದರು.