ಸ್ವಾಸ್ಥ್ಯ ಸಮಾಜ ನಿರ್ಮಾಣದತ್ತ ವಿದ್ಯಾರ್ಥಿಗಳು ಮುಂದಾಗಲಿ: ವೃತ್ತ ಆರಕ್ಷಕ ನಿರೀಕ್ಷಕ ಚಂದ್ರಶೇಖರ್

| Published : Jun 29 2025, 01:32 AM IST

ಸ್ವಾಸ್ಥ್ಯ ಸಮಾಜ ನಿರ್ಮಾಣದತ್ತ ವಿದ್ಯಾರ್ಥಿಗಳು ಮುಂದಾಗಲಿ: ವೃತ್ತ ಆರಕ್ಷಕ ನಿರೀಕ್ಷಕ ಚಂದ್ರಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಡ್ರೈವಿಂಗ್ ಲೈಸೆನ್ಸ್ ಪಡೆದು, ಹೆಲ್ಮೆಟ್ ಧರಿಸಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದೆಂದು ತಿಳಿಸಿ, ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಸೈಬರ್ ಸಹಾಯವಾಣಿ ೧೯೩೦ರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನದಿಂದ ಮುಕ್ತರಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವತ್ತ ಮುಂದಾಗಬೇಕೆಂದು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ಆರಕ್ಷಕ ನಿರೀಕ್ಷಕ ಚಂದ್ರಶೇಖರ್ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಿಪಟೂರು ನಗರ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಮಾದಕ ದ್ರವ್ಯ ಸೇವನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದಲ್ಲಿ ಶೇ.೬೦ರಷ್ಟು ಯುವ ಜನತೆಯಿದ್ದು, ದೇಶದ ಆರ್ಥಿಕಾಭಿವೃದ್ಧಿಯು ತ್ವರಿತಗತಿಯಲ್ಲಿ ಸಾಗುತ್ತಿದೆ. ಆದರೆ ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆಗಳ ಜೊತೆಯಲ್ಲಿ ಮಾದಕ ವಸ್ತು ಸೇವನೆ, ಬಾಲ್ಯ ವಿವಾಹದಂಥ ಸಾಮಾಜಿಕ ಪಿಡುಗುಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಮಾದಕ ವಸ್ತುಗಳಾದ ಗಾಂಜಾ, ಅಫೀಮು, ಕೊಕೈನ್ ಮುಂತಾದ ಸೇವನೆ ಯುವ ಜನತೆಯ ಮೇಲೆ ತೀವ್ರ ದುಷ್ಟರಿಣಾಮ ಉಂಟು ಮಾಡುತ್ತಿದ್ದು, ಅಪರಾಧಗಳು ಹೆಚ್ಚಲು ಕಾರಣವಾಗಲಿದೆ. ಆದ್ದರಿಂದ ಯುವ ಪೀಳಿಗೆ ಇಂತಹ ಅಮಲು ಪದಾರ್ಥಗಳ ಸೇವನೆಯ ವ್ಯಸನದಿಂದ ಮುಕ್ತರಾಗಬೇಕೆಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ನಗರಠಾಣೆ ಸಬ್‌ಇನ್ಸ್‌ಫೆಕ್ಟರ್ ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಡ್ರೈವಿಂಗ್ ಲೈಸೆನ್ಸ್ ಪಡೆದು, ಹೆಲ್ಮೆಟ್ ಧರಿಸಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದೆಂದು ತಿಳಿಸಿ, ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಸೈಬರ್ ಸಹಾಯವಾಣಿ ೧೯೩೦ರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಹಿತರಕ್ಷಣಾ ಸಮಿತಿ ಮೇಲ್ವಿಚಾರಕಿ ಸಿಂಧೂ, ಉಪನ್ಯಾಸಕರಾದ ಷಡಕ್ಷರಿ, ಭೈರೇಶ್, ಅಭಿಷೇಕ್, ಸೋಮಶೇಖರ್, ಪ್ರಕಾಶ್, ದೀಪಕ್, ನಾಗರತ್ನ, ರಂಜಿತಾ, ಅರ್ಚನಾ, ಅನೂಷ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.