ಕನ್ನಡಪ್ರಭ ವಾರ್ತೆ ಹನೂರು
ಪ್ರತಿಯೊಬ್ಬ ವಿದ್ಯಾರ್ಥಿಗೂ ದ್ವಿತೀಯ ಪಿಯುಸಿ ಒಂದು ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳುವಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ ನಿಶಾಂತ್ ತಿಳಿಸಿದರು.ಪಟ್ಟಣದ ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶ್ರದ್ಧೆಯಿಂದ ಹಗಲು- ರಾತ್ರಿ ಓದಿದರೆ ಮಾತ್ರ ಉತ್ತಮ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಿಂದ ದೂರವಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೆ, ನಿಮ್ಮ ಗುರಿ ನೀವು ತಲುಪಬಹುದು ಎಂದು ಕಿವಿಮಾತು ಹೇಳಿದರು.ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಡಿಗ್ರಿ ಪಡೆದುಕೊಂಡರೆ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ಕಾಲೇಜು ದಿನಗಳನ್ನು ವ್ಯರ್ಥ ಮಾಡಿಕೊಳ್ಳದೆ ನೀಟ್, ಸಿಇಟಿಗಳಂಥ ಪರೀಕ್ಷೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳಬೇಕು. ಪ್ರಸ್ತುತ ಕ್ರಿಸ್ತ ರಾಜ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ವೈದ್ಯರಾಗಿ, ವಕೀಲರಾಗಿ, ಉನ್ನತ ಅಧಿಕಾರಿಗಳಾಗಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು. ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿರದ ಕಾರಣ ಈ ಭಾಗದ ವಿದ್ಯಾರ್ಥಿಗಳು ವೈದ್ಯರಾಗಿ ನಗರ ಪ್ರದೇಶಗಳಲ್ಲಿ ಆಸ್ಪತ್ರೆ ಪ್ರಾರಂಭಿಸುವ ಬದಲು ಪಟ್ಟಣದಲ್ಲೇ ಆಸ್ಪತ್ರೆ ತೆರೆದು ಸ್ಥಳೀಯರಿಗೆ ಹೆಚ್ಚಿನ ಸೇವೆ ಒದಗಿಸಿ ಕೊಟ್ಟರೆ ಜೀವನ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.
ಕ್ರಿಸ್ತರಾಜ ವಿದ್ಯಾಸಂಸ್ಥೆಯು ಕಳೆದ 40 ವರ್ಷಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಂತಸದ ವಿಚಾರ. ಶಾಲೆಯು ಶೈಕ್ಷಣಿಕವಾಗಿ ಅಲ್ಲದೆ, ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳು ವಿವಿಧ ಆಟೋಟಗಳಲ್ಲಿ ಜಿಲ್ಲಾ, ರಾಜ್ಯ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ತಂದಿರುವುದು ಸಂತಸದ ವಿಚಾರ. ಪ್ರಸಕ್ತ ಸಾಲಿನಲ್ಲಿಯೂ ಕ್ರಿಸ್ತರಾಜ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವುದರ ಮೂಲಕ ತಾಲೂಕಿಗೆ ಕೀರ್ತಿ ತರುವಂತಾಗಬೇಕು ಎಂದು ಆಶಿಸಿದರು.
ಕ್ರಿಸ್ತರಾಜ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೋಷನ್ ಮಾತನಾಡಿ, ಕ್ರಿಸ್ತರಾಜ ವಿದ್ಯಾಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕೆಲವೊಮ್ಮೆ ಕಡು ಬಡವರಿಗೆ ಯಾವುದೇ ಶುಲ್ಕ ಪಡೆಯದೆ ಉಚಿತ ಶಿಕ್ಷಣವನ್ನೂ ನೀಡಿರುವ ನಿದರ್ಶನಗಳಿವೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ರಾಜ್ಯ, ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ನಾವೆಲ್ಲರೂ ಹೆಮ್ಮೆಪಡುವ ವಿಚಾರ, ಅದೇ ರೀತಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯುವ ಮುಖಂಡರು, ಸಮಾಜ ಸೇವಕ ನಿಶಾಂತ್ ರವರು ಯುವಕರ ಆಶಾಕಿರಣವಾಗಿ ಕಳೆದ ಹಲವಾರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಅಧಿಕಾರವಿಲ್ಲದಿದ್ದರೂ ಬಡ ಜನರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮುಂದಿನ ದಿನಗಳಲ್ಲಿ ಒಳಿತಾಗಲಿ ಎಂದು ಶುಭ ಹಾರೈಸಿದರು.
ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು, ರಾಜ್ಯಮಟ್ಟದಲ್ಲಿ ಕಾಲೇಜು ಹಾಗೂ ಜಿಲ್ಲೆಯನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಯುವ ಮುಖಂಡ ನಿಶಾಂತ್, ಶಾಲಾ ವ್ಯವಸ್ಥಾಪಕ ರೋಷನ್ ಸೇರಿ ಅತಿಥಿಗಳು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಮಹದೇಶ್, ಪ್ರಾಂಶುಪಾಲರಾದ ಸಿಸ್ಟರ್ ಜಾನ್ ಶಾಂತಿ, ಶಿಕ್ಷಕರಾದ ಮಹದೇವ ಪ್ರಸಾದ್, ಚಂದ್ರಶೇಖರ್, ಸಂತೋಷ್, ಪುಷ್ಪ, ಸಿಸ್ಟರ್ ಜೆಸಿಂತಾ ಗಲ್ಬಾವೋ , ಉಪನ್ಯಾಸಕರಾದ ವಿನೋದ್, ಪ್ರಕಾಶ್, ಸೋಮಣ್ಣ, ಜೈನ್ ಮುತ್ತು, ಪವಿತ್ರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.