ಸಾರಾಂಶ
ಕಾರವಾರ: ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ಕೇವಲ ಪಠ್ಯಪುಸ್ತಕಗಳಿಂದ ಮಾತ್ರ ಸಾಧ್ಯವಿಲ್ಲ. ಸಾಂಸ್ಕೃತಿಕವಾಗಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಧೈರ್ಯದಿಂದ ಕಾರ್ಯ ಸಾಧನೆಗೆ ಮುನ್ನಡೆಯಬೇಕು ಎಂದು ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಾರ್ಜ್ ಫನಾಂಡೀಸ್ ತಿಳಿಸಿದರು.
ಅಂಕೋಲಾದ ಇಂದು ಸಂಗಾತಿ ರಂಗಭೂಮಿ, ಬೆಂಗಳೂರಿನ ಕರ್ನಾಟಕ ಬೀದಿ ನಾಟಕ ಅಕಾಡೆಮಿ ವತಿಯಿಂದ ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬೀದಿ ರಂಗದಿನ ಹಾಗೂ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಈ ಕಾರ್ಯಕ್ರಮವು ನಾಡಿನ ಖ್ಯಾತ ರಂಗಭೂಮಿ ಕಲಾವಿದರನ್ನು ಗುರುತಿಸಿ, ಗೌರವಿಸುವ ವಿಭಿನ್ನ ಕಾರ್ಯಕ್ರಮವಾಗಿದ್ದು, ರಾಜ್ಯಮಟ್ಟದ ಈ ಪುರಸ್ಕಾರದಿಂದ ಯುವಜನರು ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ ಎಂದರು.ಹಿರಿಯ ಬೀದಿನಾಟಕ ಹಾಗೂ ಜಾನಪದ ಕಲಾವಿದ ಪುರುಷೋತ್ತಮ ಪಿ. ಗೌಡ ಅಮದಳ್ಳಿ ಅವರಿಗೆ ಸಿಜಿಕೆ ರಂಗಪುರಸ್ಕಾರ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಬಿಜಿವಿಎಸ್ ವಿಶ್ರಾಂತ ಪ್ರಾಚಾರ್ಯ ಡಾ. ಮಹೇಶ ಜಿ. ಗೋಳಿಕಟ್ಟೆ ಮಾತನಾಡಿ, ಸಿಜಿಕೆ ಪ್ರಶಸ್ತಿ ನೀಡುವ ಪದ್ಧತಿ ಎಲ್ಲ ಪ್ರಶಸ್ತಿ ನೀಡುವವರಿಗೆ ಮಾದರಿಯಾಗಿದೆ. ಯಾವುದೇ ರಾಜಕೀಯ ಪ್ರೇರಿತವಿಲ್ಲದೇ ಅರ್ಹ ಕಲಾವಿದರನ್ನು ಗುರುತಿಸಿ ಸಂಗಾತಿ ರಂಗಭೂಮಿ ಮತ್ತು ಬೀದಿ ನಾಟಕ ಅಕಾಡೆಮಿ ಗೌರವಿಸುತ್ತಾ ಬಂದಿದೆ ಎಂದರು.ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೇಶವ ಕೆ.ಜಿ. ಮಾತನಾಡಿ, ನಮ್ಮ ಕಾಲೇಜಿನಲ್ಲಿ ಇಂತಹ ಅರ್ಥಪೂರ್ಣ ಹಾಗೂ ಮಹಾನ್ ಸಾಧಕರ ಹೆಸರಿನಲ್ಲಿ ಕಾರ್ಯಕ್ರಮ ಸಂಘಟಿಸಿರುವುದು ಸಂತಸ ತಂದಿದೆ ಎಂದರು.
ನಿವೃತ್ತ ಅಧ್ಯಾಪಕ ಪ್ರೊ. ಶ್ರೀಧರ ಬಿ. ನಾಯಕ ಅವರು ಸಿಜಿಕೆ ರಂಗಪುರಸ್ಕಾರಕ್ಕೆ ಭಾಜನರಾದ ಪುರುಷೋತ್ತಮ ಪಿ. ಗೌಡ ಅವರನ್ನು ಅಭಿನಂದಿಸಿದರು.ಸಿಜಿಕೆ ರಂಗಪುರಸ್ಕಾರ ಹಾಗೂ ಬೀದಿರಂಗ ದಿನದ ಸಂಚಾಲಕ ಕೆ. ರಮೇಶ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಂಟದೇವ ಯುವಕ ಸಂಘದ ಕಲಾವಿದರಿಂದ ವಿವಿಧ ಜಾನಪದ ಗೀತೆ ಕಲಾ ಪ್ರದರ್ಶನ ನಡೆಯಿತು. ಕಲಾವಿದ ಆನಂದರಾಜ ನಾಯರ ಅವರು ಪ್ರಾರ್ಥನಾ ಗೀತೆ ಹಾಡಿದರು. ಸಂಗಾತಿ ರಂಗಭೂಮಿ ತಂಡದ ಪ್ರಮುಖರಾದ ಮಂಗಲಾ ಕೇಣಿ, ಕವನಾ ನಾಯ್ಕ, ಸೇವಂತಿ ಗುನಗಾ, ಯೋಗಿನಿ ಗೌಡ ಹಾಗೂ ಬಂಟದೇವ ಯುವ ಸಂಘದ ಕಲಾವಿದರಾದ ಮಂಜುನಾಥ ಮುದ್ಗೇಕರ, ಶ್ರೀನಿವಾಸ ಅಂಬಿಗ, ಅನಂತ ಹುಲಸ್ವಾರ, ನಾಗರಾಜ ಗೌಡ ಮುಂತಾದವರಿದ್ದರು. ಗ್ರಂಥಪಾಲಕರಾದ ಸುರೇಶ ಗುಡಿಮನಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ರಾಜೇಶ ಮಾರಾಠೆ ವಂದಿಸಿದರು. ಪುರುಷೋತ್ತಮ ಗೌಡ ಅವರ ಪತ್ನಿ ಶಶಿಕಲಾ ಗೌಡ ಹಾಗೂ ಪ್ರತಿಭಾವಂತ ಲೇಖಕರಾದ ಸಂಧ್ಯಾ ಕದಂ ಅವರಿಗೆ ಹೂವುವನ್ನು ನೀಡಿ ಗೌರವಿಸಲಾಯಿತು.