ಸಾರಾಂಶ
- ಲಕ್ಯಾ- 1 ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಹಿರೇಗೌಜ ಗ್ರಾಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಚಿಕ್ಕಗೌಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಲಕ್ಯಾ - 1 ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರು ಈ ಹಿಂದೆ ವಿದ್ಯಾರ್ಥಿಗಳಿಗೆ ಹೆಚ್ಚು ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದರು. ಈಗ ಅದಕ್ಕಿಂತ ಹೆಚ್ಚು ಪ್ರೋತ್ಸಾಹಿಸುತ್ತಿರುವುದು ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ ಹೊರತರಲು ಸಹಕಾರಿಯಾಗಿದೆ ಎಂದು ತಿಳಿಸಿದರು.ಇಂದು ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ವಲಯ, ತಾಲೂಕು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಹೋಗುವ ಜೊತೆಗೆ ದೇಶದ ಉನ್ನತ ಕ್ರೀಡೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ಹಾರೈಸಿದರು.ಭಾರತ ಒಲಂಪಿಕ್ ಕ್ರೀಡೆಯಲ್ಲಿ ಸ್ವರ್ಣ ಪದಕದ ಜೊತೆಗೆ ಅತೀ ಹೆಚ್ಚು ಪದಕಗಳಿಸುವ ಮೂಲಕ ಪ್ರಪಂಚದಲ್ಲೇ ಕ್ರೀಡೆಯಲ್ಲಿ ಮುಂಚೂಣಿ ರಾಷ್ಟ್ರವಾಗಿತ್ತು. ಕ್ರಿಕೆಟ್‌ನಲ್ಲೂ ವಿಶ್ವಕಪ್ ಗೆದ್ದು ಕ್ರೀಡೆ ಮಹತ್ವ ತಿಳಿಸಿದೆ ಎಂದು ಬಣ್ಣಿಸಿದರು.ಗ್ರಾಮೀಣ ಮಟ್ಟದ ಈ ಕ್ರೀಡಾಕೂಟದಲ್ಲಿ ಹಳ್ಳಿ ಮಕ್ಕಳಲ್ಲಿ ಅತೀ ಹೆಚ್ಚು ಕ್ರೀಡಾ ಮನೋಭಾವ ಕಾಣುತ್ತಿದ್ದೇವೆ. ಕಬಡ್ಡಿ, ಖೋಖೋ, ವಾಲೀಬಾಲ್ ಮುಂತಾದ ಗ್ರಾಮೀಣ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿವಹಿಸಿ ಸ್ಪರ್ಧಾ ಮನೋಭಾವದಿಂದ ಭಾಗವಹಿಸ ಬೇಕೆಂದು ಕಿವಿಮಾತು ಹೇಳಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಳ್ಳಿ ಪ್ರತಿಭೆಗಳು ಅತೀ ಹೆಚ್ಚು ಭಾಗವಹಿಸಿ ಸದೃಢರಾಗಬೇಕು. ಜಾವಲಿನ್ ಥ್ರೋಬಾಲ್ ಕ್ರೀಡೆಯಲ್ಲಿ ನೀರಜ್ ಛೋಪ್ರಾ ಪದಕ ಬೆಳ್ಳಿ ಪದಕ ಗೆದ್ದು ಬಂದ ಗ್ರಾಮೀಣ ಭಾಗದ ಕ್ರೀಡಾಪಟು ಆಗಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಹೆಚ್ಚು ಪದಕ ಗಳಿಸಿದ ಕ್ರೀಡಾಪಟುಗಳನ್ನು ಅಭಿನಂದಿಸಿದರು.ವಿದ್ಯಾಭ್ಯಾಸದ ಜೊತೆಗೆ ಆಸಕ್ತಿಗೆ ತಕ್ಕಂತೆ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಬೇಕು. ಇದಕ್ಕೆ ದೈಹಿಕ ಶಿಕ್ಷಕರು ಪೂರಕವಾಗಿ ಸ್ಪಂದಿಸಿ, ಪ್ರತಿಭೆ ಗುರುತಿಸುವ ಕಾರ್ಯ ಮಾಡಬೇಕೆಂದು ಕರೆನೀಡಿದರು.ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಹಿರೇಗೌಜ ಗ್ರಾಪಂ ಅಧ್ಯಕ್ಷೆ ಮಂಜುಳಾ ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ಶಿವಕುಮಾರ್, ಹಾಲೇಗೌಡ, ಸುರೇಶ್, ಪರಶುರಾಮ್, ನಾಗರಾಜ್, ಪರಮೇಶ್, ಕಿರಣ್ ಉಪಸ್ಥಿತರಿದ್ದರು. ಚಿಕ್ಕಗೌಜ ಶಾಲೆಯ ಮುಖ್ಯ ಶಿಕ್ಷಕ ಕುಮಾರ್ ಸ್ವಾಗತಿಸಿದರು.
27 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ನಡೆದ ಲಕ್ಯಾ - 1 ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು.