ವಿದ್ಯಾರ್ಥಿಗಳು ಸಾಹಿತ್ಯ ಸಂಬಂಧಿತ ಪುಸ್ತಕಗಳನ್ನು ಓದಬೇಕು: ಮಾರುತಿ ದಾಸಣ್ಣನವರ್

| Published : Mar 24 2025, 12:34 AM IST

ಸಾರಾಂಶ

ಇಂದಿನ ಇಂಟರ್‌ನೆಟ್‌ ಯುಗದಲ್ಲಿ ಕೆಲ ಸಮಯವಾದರೂ ವಿದ್ಯಾರ್ಥಿಗಳು ಗ್ರಂಥಾಲಯದ ಮೊರೆ ಹೋಗಬೇಕು ಎಂದು ಮಾರುತಿ ದಾಸಣ್ಣನವರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಇಂದಿನ ಇಂಟರ್ನೆಟ್ ಯುಗದಲ್ಲಿ ಕೆಲ ಸಮಯವಾದರೂ ವಿದ್ಯಾರ್ಥಿಗಳು ಗ್ರಂಥಾಲಯದ ಮೊರೆ ಹೋಗಬೇಕು. ಸಾಹಿತ್ಯ ಸಂಬಂಧಿತ ಪುಸ್ತಕಗಳನ್ನು ಓದಬೇಕು ಎಂದು ಗಾಳಿಬೀಡಿನ ನವೋದಯ ವಿದ್ಯಾಲಯದ ಉಪನ್ಯಾಸಕರು ಸಾಹಿತಿಗಳು ಆದ ಮಾರುತಿ ದಾಸಣ್ಣನವರ್ ನುಡಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ನಾ ಡಿಸೋಜಾ ಮಕ್ಕಳ ಸಾಹಿತ್ಯ ದತ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.

ಮುಂದುವರೆದ ಅವರು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾ ಡಿಸೋಜಾರವರು ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ನಾ ಡಿಸೋಜಾರವರ ಮಕ್ಕಳ ಸಾಹಿತ್ಯ ವಿಶಿಷ್ಟವಾದದ್ದು, ಮಕ್ಕಳ ಬಗ್ಗೆ ಹಲವಾರು ಕಥೆಗಳನ್ನು ರಚಿಸಿದ್ದಾರೆ. ಅವರು ಪಂಚತಂತ್ರದ ಕಥೆಗಳ ಮುಂದೆ ಯಾವುದೇ ಮಕ್ಕಳ ಕಥೆಗಳು ಇಲ್ಲ ಎನ್ನುವ ಮಾತನ್ನು ಕೂಡ ಹೇಳಿದ್ದರು. ಅಲ್ಲದೆ ಕನ್ನಡ ಸಾರಸ್ವತ ಲೋಕದಲ್ಲಿ ಹಲವಾರು ಹಿರಿಯ ಸಾಹಿತಿಗಳು ತಮ್ಮ ವಿಚಾರವನ್ನು ಮಂಡಿಸಿದ್ದಾರೆ ಅವೆಲ್ಲವನ್ನು ಓದುವ ಅವಕಾಶ ವಿದ್ಯಾರ್ಥಿಗಳಿಗೆ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ರವರು ನಾಬರ್ಟ್ ಡಿಸೋಜ ಇದು ನಾ ಡಿಸೋಜಾರವರ ಹೆಸರು. ಸರ್ಕಾರಿ ನೌಕರರಾಗಿದ್ದು ಸಾಹಿತ್ಯ ಲೋಕದಲ್ಲಿ ಹೆಚ್ಚು ಅತ್ಯುತ್ತಮ ಕೃತಿಗಳನ್ನು ನೀಡಿದ ಸರಳ ಸಜ್ಜನ ಸಾಹಿತಿ ಆಗಿರುತ್ತಾರೆ. ಅವರಿಗೆ ಡಾಕ್ಟರೇಟ್ ಪದವಿ ಬಂದಿದ್ದರು ತಮ್ಮ ಹೆಸರಿನೊಂದಿಗೆ ಡಾಕ್ಟರ್ ಪದವನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಇವರು 2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ನಾನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದು ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿತ್ತು. ಕೊಡಗು ಕಂಡು ಕೇಳರಿಯದಷ್ಟು ಸಾಹಿತಿಗಳು ಕನ್ನಡ ಅಭಿಮಾನಿಗಳು ಜಿಲ್ಲೆಗೆ ಆಗಮಿಸಿದ್ದರು. ಸುಮಾರು 3 ಲಕ್ಷ ಸಾಹಿತ್ಯ ಅಭಿಮಾನಿಗಳು ಆಗಮಿಸಿದ್ದು ದಾಖಲೆಯೇ ಸರಿ ಎಂದರು. ಅವರು ಸಮ್ಮೇಳನಾಧ್ಯಕ್ಷರಾಗಿದ್ದ ನೆನಪಿಗಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ದತ್ತಿ ಸ್ಥಾಪಿಸಿದ್ದು ಮಕ್ಕಳಿಗೆ ಸಾಹಿತ್ಯದ ಒಲವು ಮೂಡಿಸುವುದು ಈ ದತ್ತಿಯ ಆಶಯವಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೂಡಕಂಡಿ‌ ದಯಾನಂದ ರವರು ಕನ್ನಡ ಸಾಹಿತ್ಯ ಪರಿಷತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಕನ್ನಡ ನಾಡು ನುಡಿ ಆಚಾರ-ವಿಚಾರ ಪರಂಪರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಕಾರ್ಯ ಮಾಡುತ್ತಿರುವುದು ಪ್ರೋತ್ಸಾಹದಾಯಕ ಎಂದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಎಸ್ ಮಹೇಶ್ ಕುಮಾರ್ ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳು, ಯುವ ಪೀಳಿಗೆ ಸಾಹಿತ್ಯದತ್ತ ಮುಖ ಮಾಡದೆ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದೆ ಅವರೆಲ್ಲರನ್ನು ಸಾಹಿತ್ಯ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ವಿಚಾರಗಳ ಕಡೆಗೆ ಕರೆದುಕೊಂಡು ಬರುವ ಕೆಲಸ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆಯಲ್ಲಿ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ರಾಜೇಶ್ ಪದ್ಮನಾಭ ರವರು ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪ್ರಬಂಧ ಸ್ಪರ್ಧೆ ಮತ್ತು ಕನ್ನಡ ಗೀತ ಗಾಯನ ಸ್ಪರ್ಧೆಯ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಿಕಾಂನ ಅಭಿಲಾಷ್ ಆರ್ ಪ್ರಥಮ ಬಹುಮಾನ ಪಡೆದರು. ದ್ವಿತೀಯ ಬಿ ಕಾಂ ನ ಸವಿತಾ ಹೆಚ್.ಎಂ ದ್ವಿತೀಯ ಬಹುಮಾನ ಪಡೆದರು. ತೃತೀಯ ಬಹುಮಾನವನ್ನು ದ್ವಿತೀಯ ಬಿ.ಎ ನ ಮೌನ ಎಚ್.ಎಸ್ ಮತ್ತು ಸುಹೈರಾ ಪಿ.ಎ ಅವರು ಪಡೆದರು.

ಕನ್ನಡ ಗೀತ ಗಾಯನ ಸ್ಪರ್ಧೆಯಲ್ಲಿ ತೃತೀಯ ಬಿ ಕಾಂ ನ ಹರೀಶ್ ಎಚ್.ಆರ್ ಪ್ರಥಮ ಸ್ಥಾನ ಪಡೆದರು. ದ್ವಿತೀಯ ಸ್ಥಾನವನ್ನು ದ್ವಿತೀಯ ಬಿ.ಎ ವಿದ್ಯಾರ್ಥಿನಿ ಕೀರ್ತನ ಪಡೆದುಕೊಂಡರೆ ತೃತೀಯ ಬಹುಮಾನವನ್ನು ಪ್ರಥಮ ಬಿ ಕಾಂ ವಿದ್ಯಾರ್ಥಿನಿ ದೀಕ್ಷಿತಾ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡುಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಮಾತನಾಡಿ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಬೆಂಬಲ ಬೇಕಾಗಿದೆ. ನೀವು ಸಾಹಿತ್ಯ ಪರಿಷತ್ತಿನ ಸದಸ್ಯರಾಗುವ ಮೂಲಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಎಸ್.ಎಸ್ ಸಂಪತ್ ಕುಮಾರ್, ಸದಸ್ಯರಾದ ಎ.ಯು ಮೊಹಮ್ಮದ್, ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅತಿಥಿಗಳ ಪರಿಚಯವನ್ನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಬಸವರಾಜ್ ಮತ್ತು ಉಪನ್ಯಾಸಕರಾದ ಡಾ. ಪ್ರಭು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿ ಹೆಚ್.ಆರ್ ಹರೀಶ್, ಸ್ವಾಗತವನ್ನು ವಿದ್ಯಾರ್ಥಿನಿ ಸುಹೈರ ನಡೆಸಿಕೊಟ್ಟರು ಕಾರ್ಯಕ್ರಮದ ವಂದನಾರ್ಪಣೆಯನ್ನು ಕಾರ್ಯಕ್ರಮದ ಸಂಯೋಜಕರು ಕನ್ನಡ ಸಹ ಪ್ರಾಧ್ಯಾಪಕರಾದ ರಘುರಾಜ್ ನಡೆಸಿಕೊಟ್ಟರು.