-ಯಾದಗಿರಿ-ಸೇಡಂ ಬಸ್ ಸಂಪರ್ಕ ಸಮಸ್ಯೆಗೆ ಬೇಸತ್ತು ವಿದ್ಯಾರ್ಥಿಗಳು ಪ್ರತಿಭಟನೆ | ಬಸ್ ತಡೆದು ವಿದ್ಯಾರ್ಥಿಗಳ ಆಕ್ರೋಶ
-----ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲೂಕಿನ ಹತ್ತಿಕುಣಿ ಗ್ರಾಮಕ್ಕೆ ಶಾಲಾ, ಕಾಲೇಜು ಸಮಯದಲ್ಲಿ ಬಸ್ ಬರುವುದಿಲ್ಲ ಎಂದು ಹತ್ತಿಕುಣಿ ಗ್ರಾಮ ಸೇರಿದಂತೆ ಯಡ್ಡಳ್ಳಿ, ಬಂದಳ್ಳಿ ಮಾರ್ಗದ ವಿದ್ಯಾರ್ಥಿಗಳು ಬಸ್ ತಡೆದು ರಸ್ತೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಕಳೆದ 15 ದಿನಗಳಿಂದ ಬಸ್ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ದಿನೆ ದಿನೆ ಸಮಸ್ಯೆ ದೊಡ್ಡದಾಗುತ್ತಿದೆ ಹೊರತು ಪರಿಹಾರ ಸಿಕ್ಕಿಲ್ಲ, ಬೆಳಿಗ್ಗೆ 8 ಗಂಟೆಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಬಸ್ ಗಾಗಿ ಕಾದು ಸೇಡಂದಿಂದ ತುಂಬಿ ತುಳುಕಾಡುವ ಬಸ್‌ನಲ್ಲಿಯೇ ನೇತಾಡಿಕೊಂಡು ತೆರಳುವಾಗ ಜೀವ ಬಾಯಿಗೆ ಬಂದಿರುತ್ತದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಬಸ್ ಸಮಸ್ಯೆ ಅಧಿಕವಾಗಿ ಶಾಲಾ, ಕಾಲೇಜುಗಳಿಗೆ ತಡವಾಗಿ ತೆರಳುವ ಪರಿಸ್ಥಿತಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಯಾದಗಿರಿ-ಸೇಡಂ ರಾಜ್ಯ ಹೆದ್ದಾರಿ ರಸ್ತೆ ಹತ್ತಿಕುಣಿಯಲ್ಲಿ ಸತತ 2 ಗಂಟೆಗಳ ಕಾಲ ವಿದ್ಯಾರ್ಥಿಗಳು ಸಹಸ್ರಾರು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶವನ್ನು ಹೊರಹಾಕಿದರು.
ಪ್ರತಿದಿನ ಸೇಡಂ ಮಾರ್ಗದಿಂದ ಬೆರಳಿಕೆಯಷ್ಟು ಬಸ್ ಯಾದಗಿರಿ ಕಡೆಗೆ ಬರುತ್ತವೆ, ಹಂದರಕಿ, ಭೀಮನಳ್ಳಿ ಗ್ರಾಮದಿಂದ ಜನರನ್ನು ತುಂಬಿಕೊಂಡು ಬಂದಾಗ ನಮಗೆ ನಿಲ್ಲಲು ಸಹ ಸ್ಥಳವಿಲ್ಲದೆ ಪರದಾಡಬೇಕಾಗುತ್ತದೆ, ಒಮ್ಮೊಮ್ಮೆ ತುಂಬಿದ ಬಸ್ ಗಳು ಟಯರ್ ಬ್ಲಾಸ್ಟ್ ಆದ ಎಷ್ಟೋ ಘಟನೆ ನಡೆದಿವೆ, ಇನ್ನು ನಿರ್ವಾಹಕರು ನಿಲ್ಲಿಸು ಎಂದರೂ ಚಾಲಕರು ನಿಲ್ಲಿಸದೆ ತೆರಳುವ ಯಾದಗಿರಿಗೆ ಬರುವ ನಿರ್ಲಕ್ಷ್ಯ ತನವನ್ನು ವಿದ್ಯಾರ್ಥಿಗಳು ಹೇಳಿದರು.
ವಿಧ್ಯಾರ್ಥಿಗಳ ಹಲವಾರು ದಿನಗಳ ತೊಂದರೆಗಳನ್ನು ಗಮನಿಸಿದ ಗ್ರಾಮದ ಮುಖಂಡರಾದ ಶರಣಪ್ಪಗೌಡ ಮಾಲಿ ಪಾಟೀಲ್, ಭೀಮರಡ್ಡಿ ರಾಂಪೂರಹಳ್ಳಿ, ವೆಂಕಟರಡ್ಡಿ ಕೌಳೂರ, ನಾಗಪ್ಪ ಗೋಪಾಳಪುರ, ಅಂಬು ನಾಯಕ, ಮಲ್ಲಿಕಾರ್ಜುನ ಕನ್ನಡಿ, ಹಣಮಂತ ನಾಯಕ, ಶರಣು ಗಡೇದ ಇತರರು ಪ್ರತಿಭಟನೆಗೆ ಸಾಥ್ ನೀಡಿ, ಗುರುವಾರ ಬೆಳಿಗ್ಗೆ ಗ್ರಾಮದಿಂದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಾದಗಿರಿಗೆ ತೆರಳುತ್ತಾರೆ, ಬೆಳಿಗ್ಗೆ 8 ರಿಂದ 9-30 ನಡುವೆ 2 ಬಸ್‌ಗಳನ್ನು ಬಿಡಬೇಕು, ಮದ್ಯಾಹ್ನ 2 ಗಂಟೆಗೆ 1 ಬಸ್ ಹಾಗೂ ಸಂಜೆ 5 ಗಂಟೆಗೆ 1ಬಸ್ ಹಂತ ಹಂತಬಾಗಿ ಸಂಚರಿಸುವಂತೆ ಒತ್ತಾಯಿಸಿದರು.ವಿಷಯ ತಿಳಿದು ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ವಿರೇಶ, ಸಾರಿಗೆ ಇಲಾಖೆ ಇನ್ಸಪೆಕ್ಟರ್ ಬಸಣ್ಣಗೌಡ ಇನ್ನೊಂದು ಬಸ್ ತೆಗೆದುಕೊಂಡು ಗ್ರಾಮಕ್ಕೆ ಆಗಮಿಸಿ, ವಿಧ್ಯಾರ್ಥಿಗಳ ಹಾಗೂ ಗ್ರಾಮದ ಮುಖಂಡರ ಜೊತೆ ಮಾತುಕತೆಯಾಡಿ, ಸಮಸ್ಯೆ ಮಾಹಿತಿ ಪಡೆದು ಮೇಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಆದಷ್ಟೂ ಬೇಗ ವಿಧ್ಯಾರ್ಥಿಗಳ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿ, ಸಮಾಧಾನಪಡಿಸಿದ ನಂತರ ಪ್ರತಿಭಟನೆ ಹಿಂತೆಗೆದುಕೊಂಡು ಬಸ್‌ಗಳಲ್ಲಿ ನಗರಕ್ಕೆ ವಿಧ್ಯಾರ್ಥಿಗಳು ಆಗಮಿಸಿದರು.
--ಬಾಕ್ಸ್
ವಾರದ ಹಿಂದಷ್ಟೆ ಹತ್ತಿಕುಣಿ ಗ್ರಾಮದ ಮಾರ್ಗದ ಯಡ್ಡಳ್ಳಿ ಗ್ರಾಮದಲ್ಲಿಯೂ ಸಹ ಇದೇ ರಸ್ತೆ ತಡೆದು ಬಸ್ಸಿಗಾಗಿ 3-4 ಗಂಟೆ ಪ್ರತಿಭಟನೆ ನಡೆಸಿದ್ದರು, ಸಮಸ್ಯೆ ಸಮಸ್ಯೆಯಾಗಿಯೆ ಉಳಿಯಿತ್ತಿದೆ ಹೊರತು ಪರಿಹಾರ ಸಾಂದರ್ಭಿಕವಾಗಿ ನೀಡುತ್ತಿದ್ದಾರೆ, ಖಾಯಂ ಪರಿಹಾರವಾಗಬೇಕಿದೆ ಎಂದು ಗ್ರಾಮದ ಮುಖಂಡ ಶರಣಪ್ಪಗೌಡ ಮಾಲಿ ಪಾಟೀಲ್ ಒತ್ತಾಯಿಸಿದರು.