ಸಾರಾಂಶ
ಜೀವ ಭಯದ ಭೀತಿ, ಮೈಯೆಲ್ಲ ಕಣ್ಣಾಗಿ ನಿತ್ಯ ಶಾಲೆಗೆ ಹೋಗ್ತಿದ್ದಾರೆ ಬಿ.ಜಿ ಕೆರೆ ಗ್ರಾಮದ ಮಕ್ಕಳು. ದಶಕದಿಂದ ಕಾಡುತ್ತಿರುವ ಅಂಡರ್ ಪಾಸ್ ಸಮಸ್ಯೆಗೆ ಪರಿಹಾರ ಇಲ್ಲದೆ ಬಾರಿ ವಾಹನ ಸಂಚಾರದ ನಡುವೆ ಹೆದ್ದಾರಿ ದಾಟಿಕೊಂಡು ವಿದ್ಯಾರ್ಥಿಗಳು ಶಾಲೆಗೆ ತೆರಳುವ ಅನಿವಾರ್ಯತೆ ಎದುರಾಗಿದೆ
ಬಿ.ಜಿ.ಕೆರೆಬಸವರಾಜ್
ಮೊಳಕಾಲ್ಮುರು : ಬೆನ್ನಿನ ಮೇಲೆ ಪುಸ್ತಕಗಳ ಹೊರೆ, ಮನದಲ್ಲಿ ಜೀವ ಭಯದ ಭೀತಿ, ಮೈಯೆಲ್ಲ ಕಣ್ಣಾಗಿ ನಿತ್ಯ ಶಾಲೆಗೆ ಹೋಗ್ತಿದ್ದಾರೆ ಬಿ.ಜಿ ಕೆರೆ ಗ್ರಾಮದ ಮಕ್ಕಳು. ದಶಕದಿಂದ ಕಾಡುತ್ತಿರುವ ಅಂಡರ್ ಪಾಸ್ ಸಮಸ್ಯೆಗೆ ಪರಿಹಾರ ಇಲ್ಲದೆ ಬಾರಿ ವಾಹನ ಸಂಚಾರದ ನಡುವೆ ಹೆದ್ದಾರಿ ದಾಟಿಕೊಂಡು ವಿದ್ಯಾರ್ಥಿಗಳು ಶಾಲೆಗೆ ತೆರಳುವ ಅನಿವಾರ್ಯತೆ ಎದುರಾಗಿದೆ. ಮಕ್ಕಳು ನಿತ್ಯ ಜೀವ ಕೈಯಲ್ಲಿ ಹಿಡಿದು ಶಾಲೆಗೆ ಹೋಗುತ್ತಿದ್ದರೂ ಅಧಿಕಾರಿಗಳಿಗೆ ಮಾತ್ರ ನೋಡಲು ಸಾಧ್ಯವಾಗದಷ್ಟರ ಮಟ್ಟಿಗೆ ದೃಷ್ಟಿ ದೋಷದಿಂದ ಬಳಲಿದ್ದಾರೆ.
ಬಿ.ಜಿ ಕೆರೆ ಗ್ರಾಮವನ್ನು ಬೀದರ್ ಶ್ರೀರಂಗ ಪಟ್ಡಣ ಹೆದ್ದಾರಿ ಸೀಳಿ ಹೋಗಿದೆ. ಹೆದ್ದಾರಿ ನಿರ್ಮಾಣಕ್ಕೂ ಮುನ್ನ ಗ್ರಾಮದ ಬಸವೇಶ್ವರ ನಗರಕ್ಕೆ ಸಂಪರ್ಕ ಸುಗಮವಾಗಿತ್ತು. ಅವೈಜ್ಞಾನಿಕವಾಗಿ ನಿರ್ಮಿಸಿರುವ ಹೆದ್ದಾರಿಯಿಂದಾಗಿ ಒಂದೇ ಗ್ರಾಮ ಎರಡು ಭಾಗವಾಗಿದೆ. ಎರಡೂ ಕಡೆಯ ನಿವಾಸಿಗಳು ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೆದ್ದಾರಿ ಅಂಚಿನಲ್ಲಿರುವ ಕಬ್ಬಿಣದ ತಡೆಗೋಡೆ ದಾಟಿಕೊಂಡು ಸಾಗುವಂತಾಗಿದೆ.
ದಶಕದಿಂದಲೂ ಅಂಡರ್ ಪಾಸ್ ನಿರ್ಮಾಣದ ಬೇಡಿಕೆ ನೆನೆಗುದಿಗೆ ಬಿದ್ದಿದೆ. ಇಬ್ಬರು ಸಂಸದರು, ಶಾಸಕರು ಬದಲಾದರೂ ಗ್ರಾಮದಲ್ಲಿ ಸಮಸ್ಯೆ ಬಗೆಹರಿದಿಲ್ಲ. ರಾಜಕಾರಣಿಗಳ ಭರವಸೆಯ ಮಾತುಗಳು ಇಂದಿಗೂ ಹಾಗೆಯೇ ಉಳಿದಿವೆ. ಬಿ.ಜಿ ಕೆರೆಗೆ ಅಂಟಿಕೊಂಡಿರುವ ಬಸವೇಶ್ವರ ನಗರದಲ್ಲಿ ಎಲ್‌ಕೆಜಿ, ಯುಕೆಜಿ, ಕರ್ನಾಟಕ ಪಬ್ಲಿಕ್ ಶಾಲೆ, ಪ್ರಾಥಮಿಕ ಶಾಲೆ, ಬಸವೇಶ್ವರ ಗ್ರಾಮಾಂತರ ಪ್ರೌಢ ಶಾಲೆಗಳಿವೆ. ಮೊಗಲಹಳ್ಳಿ, ರಾವಲಕುಂಟೆ, ಮುತ್ತಿಗಾರಹಳ್ಳಿ, ಸೂರಮ್ಮನಹಳ್ಳಿ, ಓಬಯ್ಯನ ಹಟ್ಟಿ ಸೇರಿದಂತೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ವಿವಿಧ ಶಾಲೆಗಳಿಗೆ ತೆರಳುತ್ತಾರೆ. ಭಯದಿಂದಲೇ ವಾಹನಗಳು ಸಾಗಿ ಬರುವ ದಿಕ್ಕನ್ನು ನೋಡುತ್ತಾ ಸಾಗುತ್ತಿದ್ದಾರೆ. ಸ್ವಲ್ವವೇ ಏಮಾರಿದರೆ ಪ್ರಾಣ ಪಕ್ಷಿಗಳು ಹಾರಿ ಹೋಗುತ್ತವೆ.
ಕೂಗಳತೆ ದೂರದಲ್ಲಿ ಇದ್ದ ಬಸವೇಶ್ವರ ನಗರ ತಲುಪಲು ಈ ಹಿಂದೆ ಕೆಲ ನಿಮಿಷಗಳು ಸಾಕಾಗಿತ್ತು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಅಲ್ಲಿಗೆ ತಲುಪಲು ನಾಲ್ಕು ಕಿಮೀ ಸುತ್ತಿ ಬರಬೇಕಿದೆ. ವೃದ್ದರ ಸ್ಥಿತಿಯಂತೂ ಹೇಳ ತೀರದಾಗಿದೆ. ರೈತಾಪಿ ವರ್ಗ ಕುರಿ, ಮೇಕೆ ಮತ್ತು ಜಾನುವಾರುಗಳನ್ನು ಹೆದ್ದಾರಿಗೆ ಅಡ್ಡಲಾಗಿ ಹಾಕಿರುವ ಕಂಬಿಗಳನ್ನು ದಾಟಿಕೊಂಡು ಸಾಗುವಂತಾಗಿದೆ. ಯಾರಾದರೂ ಅಸು ನೀಗಿದ್ದಲ್ಲಿ ಅಂತ್ಯ ಸಂಸ್ಕಾರಕ್ಕೆ ಹಳೆ ಊರಿನ ಸಮೀಪದ ಸ್ಮಶಾನಕ್ಕೆ ತೆರಳಬೇಕು. ಅಂಡರ್ ಪಾಸ್ ಇಲ್ಲದೆ ರಸ್ತೆಗೆ ಅಡ್ಡಲಾಗಿರುವ ಕಂಬಿಗಳನ್ನು ದಾಟಲಾಗದೆ ಶವವನ್ನು ಹೊತ್ತು ನಾಲ್ಕು ಕಿಮೀ ಸುತ್ತಿ ಶವ ಸಂಸ್ಕಾರ ಮಾಡುವಂತಹ ಸಂಕಷ್ಟ ತಲೆ ದೂರಿದೆ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಹೆದ್ದಾರಿಯಿಂದ ಸಮಸ್ಯೆ ಎದುರಾಗಿದ್ದು, ಅಧಿಕಾರಿಗಳ ಹೊಣೆಗೇಡಿ ತನಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.
ಕಳೆದ ವರ್ಷ ಇದೇ ಸ್ಥಳದಲ್ಲಿ ರಸ್ತೆ ದಾಟುವ ವೇಳೆ ವಾಹನಕ್ಕೆ ಸಿಲುಕಿ ಹತ್ತಾರು ಕುರಿಗಳು ಅಸುನೀಗಿದ್ದವು. ಕಾರು ಗುದ್ದಿ ವ್ಯಕ್ತಿಯೊಬ್ಬ ಮೃತ ಪಟ್ಟಿದ್ದ.ಅಂದು ಜನತೆ ರಸ್ತೆಗಿಳಿದು ಪ್ರತಿಭಟಿಸಿ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬಂದ್ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳ ತಂಡ ಎರಡು ತಿಂಗಳಲ್ಲಿ ಮೇಲ್ಸೇತುವೆ ನಿರ್ಮಿಸುವ ಭರವಸೆ ನೀಡಿತ್ತಾದರೂ ವರ್ಷ ಕಳೆಯುತ್ತಾ ಬಂದರೂ ನಿರ್ಮಾಣದ ಯಾವ ಕುರುಹುಗಳು ಕಾಣಿಸುತ್ತಿಲ್ಲ.
ಅಂಡರ್ ಪಾಸ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಂಸತ್ ಸದಸ್ಯರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಳೆದ ಬಾರಿ ಅಧಿಕಾರಿಗಳು ನೀಡಿದ್ದ ಭರವಸೆಗಳು ಹೆದ್ದಾರಿಗುಂಟ ಗಾಳಿಗೆ ಹಾರಿ ಹೋಗಿವೆ.
ಬಿಜಿಕೆರೆಯಲ್ಲಿ ಅಂಡರ್ ಪಾಸ್ ಇಲ್ಲದೆ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ನೂರಾರು ವಿದ್ಯಾರ್ಥಿಗಳು ಆತಂಕದಲ್ಲಿ ಹೆದ್ದಾರಿ ದಾಟುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಸ್ಥಳದಲ್ಲಿ ನಡೆದ ಅಪಘಾತದಿಂದ ಜಿಲ್ಲಾಧಿಕಾರಿಗಳು ಮೇಲ್ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು. ವರ್ಷ ಕಳೆದರೂ ಸೇತುವೆ ನಿರ್ಮಾಣವಾಗಿಲ್ಲ. ಬಾರಿ ಅನಾಹುತ ಸಂಭವಿಸುವ ಮುನ್ನ ಅಂಡರ್ ಪಾಸ್ ನಿರ್ಮಿಸಬೇಕು.
-ಎಸ್.ಜಯಣ್ಣ.ಗ್ರಾಪಂ ಅಧ್ಯಕ್ಷ. ಬಿ.ಜಿ ಕೆರೆ