ಬೇಸಿಗೆ ರಜೆ ಮುಗಿಸಿ ಶಾಲೆಗೆ ಮರಳಿದ ವಿದ್ಯಾರ್ಥಿಗಳು

| Published : May 21 2024, 12:32 AM IST / Updated: May 21 2024, 12:33 AM IST

ಸಾರಾಂಶ

ಬೇಸಿಗೆ ರಜೆ ಮುಗಿದು ರಾಜ್ಯಾದ್ಯಂತ ಅನೇಕ ಖಾಸಗಿ ಶಾಲೆಗಳು ತೆರೆದುಕೊಳ್ಳುತ್ತಿದ್ದು, ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಮಾಡಲ್ ಪಬ್ಲಿಕ್ ಶಾಲೆ ಸೋಮವಾರ ಪುನರಾರಂಭಗೊಂಡಿತು. ಶಾಲೆ ಪ್ರಾಂಶುಪಾಲರು, ಅಧ್ಯಾಪಕರು, ಸಿಬ್ಬಂದಿಯಿಂದ ಭಾರತೀಯ ಸನಾತನ ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ಶಾಲೆಗೆ ಆಗಮಿಸಿದ ಮೊದಲ 10 ವಿದ್ಯಾರ್ಥಿಗಳಿಗೆ ಹೂವಿನ ಹಾರ ಹಾಗೂ ಪ್ರತಿ ವಿದ್ಯಾರ್ಥಿಗಳಿಗೂ ತಿಲಕವಿಟ್ಟು ಅಕ್ಷತೆ ಹಾಕಿ, ಆರತಿ ಬೆಳಗಿ ವಿಶೇಷ ಮಂಗಳವಾದ್ಯದೊಂದಿಗೆ ಸಾಂಪ್ರದಾಯಕ ಪೂರ್ಣಕುಂಭದೊಂದಿಗೆ ಸ್ವಾಗತ ನೀಡಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಬೇಸಿಗೆ ರಜೆ ಮುಗಿದು ರಾಜ್ಯಾದ್ಯಂತ ಅನೇಕ ಖಾಸಗಿ ಶಾಲೆಗಳು ತೆರೆದುಕೊಳ್ಳುತ್ತಿದ್ದು, ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಮಾಡಲ್ ಪಬ್ಲಿಕ್ ಶಾಲೆ ಸೋಮವಾರ ಪುನರಾರಂಭಗೊಂಡಿತು.

ಶಾಲೆ ಪ್ರಾಂಶುಪಾಲರು, ಅಧ್ಯಾಪಕರು, ಸಿಬ್ಬಂದಿಯಿಂದ ಭಾರತೀಯ ಸನಾತನ ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ಶಾಲೆಗೆ ಆಗಮಿಸಿದ ಮೊದಲ 10 ವಿದ್ಯಾರ್ಥಿಗಳಿಗೆ ಹೂವಿನ ಹಾರ ಹಾಗೂ ಪ್ರತಿ ವಿದ್ಯಾರ್ಥಿಗಳಿಗೂ ತಿಲಕವಿಟ್ಟು ಅಕ್ಷತೆ ಹಾಕಿ, ಆರತಿ ಬೆಳಗಿ ವಿಶೇಷ ಮಂಗಳವಾದ್ಯದೊಂದಿಗೆ ಸಾಂಪ್ರದಾಯಕ ಪೂರ್ಣಕುಂಭದೊಂದಿಗೆ ಸ್ವಾಗತ ನೀಡಲಾಯಿತು.

ಶಾಲಾ ಪ್ರಾಂಗಣ ಮದುವಣಗಿತ್ತಿಯಂತೆ ಸಿಂಗಾರಗೊಂಡು ಸಂಭ್ರಮಿಸುತ್ತಿತ್ತು. ರಜಾ-ಮಜಾದ ಸ್ವಚ್ಛಂದ ಮನಸ್ಥಿತಿಯಲ್ಲಿದ್ದ ಮಕ್ಕಳು ಶಾಲೆ ಕಡೆ ಮುಖಮಾಡಲು ಬೇಸರವೇ ಸರಿ. ಆದರೆ, ಶಿಕ್ಷಕರ ಉತ್ಸಾಹಪೂರ್ಣ ಸ್ವಾಗತ ಮಕ್ಕಳು ಖುಷಿಯಿಂದಲೇ ಮೆರವಣಿಗೆಯಲ್ಲಿ ಆಗಮಿಸಿದರು.

ಬಳಿಕ ನಡೆದ ಪ್ರಾರ್ಥನಾ ಸಭೆಯಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮು ಮಾತನಾಡಿ, ಪ್ರಸ್ತುತ ವರ್ಷದಲ್ಲಿ ವಿಶೇಷ ಶೈಕ್ಷಣಿಕ ಯೋಜನೆ ರೂಪಿಸಲಾಗಿದೆ. ಆದಿಚುಂಚನಗಿರಿ ಆಸ್ಪತ್ರೆ ಸಹಯೋಗದಲ್ಲಿ ವೈದ್ಯರು, ಪ್ರಾಧ್ಯಾಪಕರು ಆಗಮಿಸಿ ವಿಶೇಷ ತರಗತಿ ನೀಡಿ ಮಾರ್ಗದರ್ಶಿಸುವುದೂ ಒಂದಾಗಿದೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ಮಾಡಲ್ ಪಬ್ಲಿಕ್ ಶಾಲೆಯು ಸುಸಜ್ಜಿತ ಕಟ್ಟಡ ಹಾಗೂ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಮಾದರಿಯಾಗಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂದರು.

ಪ್ರಾಂಶುಪಾಲ ವಿ.ಪುಟ್ಟಸ್ವಾಮಿ ಮಾತನಾಡಿ, ಮಕ್ಕಳು ಈ ದೇಶದ ಭವಿಷ್ಯ, ಅವರ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನಕ್ಕಾಗಿ ಹಲವು ಸಂಕಲ್ಪ ಕೈಗೊಂಡಿದ್ದೇವೆ. ಈ ವಿಶೇಷ ಸ್ವಾಗತ ತಯಾರಿ ಸಾರ್ಥಕವಾಗಿದೆ ಎಂದೇ ಭಾವಿಸುತ್ತೇನೆ. ಪೋಷಕರು ಹಾಗೂ ವಿದ್ಯಾರ್ಥಿಗಳ ಆಶಾದಾಯಕ ಸಹಕಾರದಿಂದ ಮೊದಲ ದಿನವೇ ನಿರೀಕ್ಷೆ ಮೀರಿ ಮಕ್ಕಳ ಹಾಜರಾತಿ ಖುಷಿ ನೀಡಿದೆ ಎಂದರು.

ಮೊದಲ ದಿನ ಶಾಲೆಗೆ ಆಗಮಿಸಿದ ಮಕ್ಕಳನ್ನು ಮನರಂಜಿಸಿ ಪ್ರೋತ್ಸಾಹಿಸಲು ಶಾಲೆಯ ಅಧ್ಯಾಪಕ ವರ್ಗದವರು ವಿಶಿಷ್ಟ ಗೀತೆ, ನೃತ್ಯಗಳಿಂದ ಶುಭ ಹಾರೈಸಿ, ಭಾವನಾತ್ಮಕವಾಗಿ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಸಿ.ದರ್ಶಿನಿ, ಸಂಯೋಜಕರಾದ ಆರೋಕ್ಯಸಾಮಿ, ಟಿ.ಎಸ್.ಗಾಯತ್ರಿ, ಸಪ್ನಾ, ಸಜೀವನ್ ಸೇರಿದಂತೆ ಹಲವರು ಇದ್ದರು.