ಹಾವೇರಿ: ಒಂದು ದೇವಸ್ಥಾನ ಕಟ್ಟುವುದಕ್ಕಿಂತ ಒಂದು ಶಾಲೆಯನ್ನು ಕಟ್ಟಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ತುಂಬಾನೇ ಅವಶ್ಯಕತೆ ಇದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.ನಗರದ ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಸನ್ಮಾನಿಸಿ ಮಾತನಾಡಿದ ಅವರು, ಜಿಲ್ಲೆಯು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡಿದೆ. ಇದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಅಭ್ಯಾಸದೊಂದಿಗೆ ಧೈರ್ಯದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳನ್ನು ಪಡೆದುಕೊಂಡಿರುವ ಹಿನ್ನೆಲೆ ಈ ಸಾಧನೆ ಸಾಧ್ಯವಾಗಿದೆ ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ, ಮಂಗಳೂರು ಹಾಗೂ ಕೆಲವು ಜಿಲ್ಲೆಗಳು ಉತ್ತಮ ಫಲಿತಾಂಶ ಪಡೆದುಕೊಂಡಿವೆ. ಅಂತಹ ಜಿಲ್ಲೆಗಳೊಂದಿಗೆ ಪೈಪೋಟಿ ಮಾಡಿ ಇಂದು ನಮ್ಮ ಜಿಲ್ಲೆ ಫಲಿತಾಂಶದಲ್ಲಿ ಸುಧಾರಣೆ ಕಂಡು ರಾಜ್ಯಕ್ಕೆ ನಮ್ಮ ಕ್ಷೇತ್ರ 7ನೇ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಜಿಲ್ಲೆಯು ಶೇ. 96ರಷ್ಟು ಸಾಧನೆ ಮಾಡಿದ್ದೇವೆ, ಇದು ಬಹಳ ದೊಡ್ಡ ಸಾಧನೆಯಾಗಿದೆ. ಜಿಲ್ಲೆಯ 58 ಶಾಲೆಗಳು ಶೇ.100ರಷ್ಟು, 17 ಶಾಲೆಗಳು ಶೇ.90 ರಿಂದ 99ರಷ್ಟು ಹಾಗೂ 7 ಶಾಲೆಗಳು ಶೇ. 80ರಿಂದ 89ರಷ್ಟು ಹಾಗೂ ಎರಡು ಶಾಲೆಗಳು ಶೇ.70 ರಿಂದ 79 ರಷ್ಟು ಫಲಿತಾಂಶ ಮಾಡಿವೆ. ಗ್ರಾಮೀಣ ಪ್ರದೇಶದಲ್ಲಿ ಶೇ.97.45ರಷ್ಟು ಫಲಿತಾಂಶ ಮಾಡಿದರೆ ನಗರ ಪ್ರದೇಶ ಶೇ. 97.35ರಷ್ಟು ಫಲಿತಾಂಶ ಮಾಡಿವೆ. ಈ ಫಲಿತಾಂಶ ಸುಧಾರಣೆಗೆ ಶ್ರಮಿಸಿದ ವಿದ್ಯಾರ್ಥಿಗಳು, ಶಾಲೆಯ ಮುಖ್ಯೋಪಾಧ್ಯಾಯರು ಎಸ್‌ಡಿಎಂಸಿ ಅಧ್ಯಕ್ಷರು, ಸದ್ಯಸರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರಿಗೆ ಅಭಿನಂದನೆಗಳನ್ನು ಅರ್ಪಿಸಿದರು. ಈ ವೇಳೆ ಶಾಸಕ ರುದ್ರಪ್ಪ ಲಮಾಣಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸಿ ಸಂತಸ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎ. ಮೈದೂರ, ಬಿಇಓ ಎಂ.ಎಚ್. ಪಾಟೀಲ, ಸವಣೂರ ತಾಲೂಕಿನ ಬಿಇಓ ಬಾರ್ಕಿ ಅವರು ಸೇರಿದಂತೆ ಇತರರು ಇದ್ದರು.