ಕನ್ನಡಪ್ರಭ ವಾರ್ತೆ ಹಾಸನ

ಮಹಿಳಾ ದಿನಾಚರಣೆಯಂದು ಮಹಿಳೆಯರ ಕಣ್ಣಲ್ಲಿ ನೀರು ತುಂಬಿ ಬಂತು. ಈ ಕಣ್ಣೀರು ದುಃಖದ ಕಣ್ಣೀರಾಗಿರದೆ, ಆನಂದಬಾಷ್ಪವಾಗಿದ್ದುದು ವಿಶೇಷ. ನಗರದ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಮಾತೃ ದೇವೋ ಭವ "ಎಂಬ ವಿಶಿಷ್ಟ ಹಾಗೂ ಭಾವನಾತ್ಮಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ತಮ್ಮ ತಾಯಂದಿರನ್ನು ಕಾಲೇಜಿಗೆ ಆಹ್ವಾನಿಸಿ, ಅವರ ಪಾದಪೂಜೆ ಮಾಡಿ, ಹೂವುಗಳನ್ನು ಅರ್ಪಿಸಿ ಗೌರವ ಸಲ್ಲಿಸಿದರು. ಹಲವಾರು ತಾಯಂದಿರು ತಮ್ಮ ಮಕ್ಕಳಿಂದ ದೊರೆತ ಗೌರವಕ್ಕೆ ಸಂತೋಷ ವ್ಯಕ್ತಪಡಿಸಿದರು. ಅವರ ಕಣ್ಗಳಲ್ಲಿ ತುಂಬಿ ಬಂದ ಸಂತೋಷದ ಕಣ್ಣೀರು ತಾಯ್ತನದ ಹೆಮ್ಮೆಯನ್ನು ಇಮ್ಮಡಿಗೊಳಿಸಿತ್ತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ತಾಯಂದಿರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳು ತಮ್ಮ ತಾಯಿಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ತಾಯಿ ತಮ್ಮ ಜೀವನದಲ್ಲಿ ನೀಡಿದ ಪ್ರೇರಣೆ, ತ್ಯಾಗ ಮತ್ತು ಬೆಂಬಲವನ್ನು ಸ್ಮರಿಸಿದರು. ತಾಯಿಯ ಪ್ರೀತಿ ಅನಂತ, ತಾಯಿಯ ಆಶೀರ್ವಾದವೇ ನಮ್ಮ ಯಶಸ್ಸಿನ ಮೂಲ ಎಂಬ ಸಂದೇಶವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ತಮ್ಮ ಮಕ್ಕಳ ಮನದ ಮಾತು ಅಮ್ಮಂದಿರ ಹೃದಯವನ್ನು ತುಂಬಿಸಿತ್ತು. ಮನಸ್ಸನ್ನು ಪ್ರಫುಲ್ಲಗೊಳಿಸಿತ್ತು.

ಕಾಲೇಜುಗಳು ಸಮಾಜದ ಭವಿಷ್ಯವನ್ನು ರೂಪಿಸುವ ಜ್ಞಾನ ಕೇಂದ್ರಗಳಾಗಿವೆ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ, ಮಹಿಳೆಯರ ಗೌರವ ಮತ್ತು ಸಮಾನತೆಯನ್ನು ಉತ್ತೇಜಿಸುವುದು. ಕಾಲೇಜುಗಳಲ್ಲಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದರಿಂದ ಯುವಜನರಲ್ಲಿ ಸಮಾನತೆ ಮತ್ತು ನ್ಯಾಯದ ಮನೋಭಾವ ಬೆಳೆದು, ಭವಿಷ್ಯದಲ್ಲಿ ಸಮಾನ ಮತ್ತು ಪ್ರಗತಿಶೀಲ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಯ ತಾಯಿ ಶ್ರೀಮತಿ.ಕನಕ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಆರ್‌. ಶಂಕರೇಗೌಡ, ನಮ್ಮೆಲ್ಲರನ್ನು ತನ್ನ ಒಡಲಿನಲ್ಲಿ ಹೊತ್ತುಕೊಂಡಿರುವವಳು ಭೂಮಿ ತಾಯಿ, ಜನ್ಮ ಕೊಟ್ಟವಳು ತಾಯಿ, ಒಂದು ಇಡೀ ಮನೆ, ಕುಟುಂಬದ ನೆಲೆ, ಶಾಂತಿ ಮತ್ತು ಒಗ್ಗಟ್ಟು ಬಹುಪಾಲು ತಾಯಿಯ ಮೇಲೆ ಅವಲಂಬಿತವಾಗಿರುತ್ತದೆ. ಆದುದರಿಂದಲೇ ನಾವು ಮಾತೃದೇವೋಭವ ಅಂದರೆ ತಾಯಿ ದೇವರಿಗೆ ಸಮಾನ ಎನ್ನುತ್ತೇವೆ. ಸಹನಶೀಲತೆ, ತಾಳ್ಮೆ, ಕ್ಷಮೆ ಈ ಎಲ್ಲಾ ಗುಣಗಳನ್ನು ದೇವರು ಹೆಣ್ಣುಮಕ್ಕಳಿಗೆ ಮಾತ್ರ ನೀಡಿದ್ದಾನೆ. ದೇಶದ ಪ್ರಗತಿ ಅಲ್ಲಿನ ಹೆಣ್ಣುಮಕ್ಕಳಿಗೆ ನೀಡುವ ಗೌರವದ ಮೇಲೆ ಅವಲಂಬಿತವಾಗಿರುತ್ತದೆ ಎಂದರು. ಒಂದು ದೇಶದಲ್ಲಿ ಮಹಿಳೆಯರಿಗೆ ಗೌರವ, ಶಿಕ್ಷಣ ಮತ್ತು ಸಮಾನ ಅವಕಾಶಗಳನ್ನು ನೀಡಿದಾಗ ಆ ದೇಶವು ವೇಗವಾಗಿ ಅಭಿವೃಧ್ಧಿಯಾಗುತ್ತದೆ. ಇಂದಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ವೈದ್ಯಕೀಯ, ಕ್ರೀಡೆ, ರಾಜಕೀಯ, ಸೇನೆ, ಆಡಳಿತ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅತ್ಯಧ್ಭುತ ಸಾಧನೆಗಳನ್ನು ಮಾಡುತ್ತಿದ್ದಾರೆ. ಪಾದಪೂಜೆ ಮಾಡುವ ಉದ್ದೇಶ ಸಂಸ್ಕಾರ, ಸಂಸ್ಕೃತಿ ಅಷ್ಟೇ ಅಲ್ಲದೆ ವೈಜ್ಞಾನಿಕ ಕಾರಣವೂ ಇದೆ. ಮಾನವ ದೇಹದಲ್ಲಿ ಅನೇಕ ನರಗಳು ಪಾದಗಳಲ್ಲಿ ಅಂತ್ಯಗೊಳ್ಳುತ್ತವೆ. ಪಾದಗಳನ್ನು ಸ್ಪರ್ಶಿಸುವಾಗ ಆ ನರಗಳಿಗೆ ಪ್ರೇರಣೆ ಸಿಗುತ್ತದೆ. ಇದು ದೇಹದಲ್ಲಿ ಶಾಂತಿ ಮತ್ತು ಸಮತೋಲನವನ್ನು ಹೆಚ್ಚಿಸುತ್ತದೆ. ತಾಯಂದಿರು ಆರ್ಥಿಕ ಜ್ಞಾನವಷ್ಟೇ ಅಲ್ಲ, ಕುಟುಂಬದ ಆರ್ಥಿಕತೆಯನ್ನು ಸುಭದ್ರಪಡಿಸಲು ಬೇಕಾಗಿರುವ ಜ್ಞಾನವನ್ನು ಪಡೆಯಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಮಹಿಳಾ ಉಪನ್ಯಾಸಕಿಯರಿಗೆ ಹಾಗೂ ಮಹಿಳಾ ಸಿಬ್ಬಂದಿಗೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಲೇಜಿನ ವಿದ್ಯಾರ್ಥಿಗಳ ತಾಯಂದಿರಿಗೆ ಉಡುಗೊರೆಗಳನ್ನು ನೀಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಲಾಯಿತು.