ಮಾತೃಭಾಷೆ ಯಾವುದಾದರೂ ಭವಿಷ್ಯದ ದೃಷ್ಟಿಯಿಂದ ಇಂಗ್ಲಿಷ್‌, ಹಿಂದಿ ಭಾಷೆಗಳನ್ನು ಕಲಿಯುವುದು ಅವಶ್ಯ. ಪಾಲಕರು, ಮಕ್ಕಳ ಮೇಲೆ ಅತಿಯಾದ ವಿಶ್ವಾಸ ಇಟ್ಟಿರುತ್ತಾರೆ. ಆ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.

ಹುಬ್ಬಳ್ಳಿ:

ಆಸಕ್ತಿ ಇರುವ ವಿಷಯದಲ್ಲಿ ವಿದ್ಯಾರ್ಜನೆ ಮಾಡಿದಲ್ಲಿ ಖಂಡಿತವಾಗಿ ಉನ್ನತ ಸ್ಥಾನಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದು ವಿಶ್ರಾಂತ ಉಪ ಕುಲಪತಿ ಡಾ. ವೆಂಕಟೇಶ ರಾಯ್ಕ‌ರ್ ಹೇಳಿದರು.

ಅವರು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಭಾರತೀಯ ಶಿಕ್ಷಣ ಮಂಡಳ ಮತ್ತು ದೈವಜ್ಞ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ 12ನೇ ತರಗತಿಯ ಬಳಿಕ ವೃತ್ತಿ ಆಯ್ಕೆಗಳ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಾತೃಭಾಷೆ ಯಾವುದಾದರೂ ಭವಿಷ್ಯದ ದೃಷ್ಟಿಯಿಂದ ಇಂಗ್ಲಿಷ್‌, ಹಿಂದಿ ಭಾಷೆಗಳನ್ನು ಕಲಿಯುವುದು ಅವಶ್ಯ. ಪಾಲಕರು, ಮಕ್ಕಳ ಮೇಲೆ ಅತಿಯಾದ ವಿಶ್ವಾಸ ಇಟ್ಟಿರುತ್ತಾರೆ. ಆ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಹಾದಿಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಸಲಹೆ ನೀಡಿದರು.

ದೈವಜ್ಞ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಜಯ ವೆರ್ಣೆಕರ ಮಾತನಾಡಿ, ಧರಿಸುವ ಬಟ್ಟೆ, ಬಳಸುವ ಮೊಬೈಲ್ ಫೋನ್ ಹಾಗೂ ಇತರ ಆಕರ್ಷಕ ವಸ್ತುಗಳು ವಿದ್ಯಾರ್ಥಿಗಳ ಬ್ರಾಂಡ್ ಆಗಬಾರದು. ಕಲಿಯುವ ವಿದ್ಯೆಯನ್ನು ಬ್ರಾಂಡ್ ಆಗಿ ರೂಪಿಸಿಕೊಳ್ಳಿ ಎಂದರು.

ವೀರೇಶ ಮೋಟಗಿ, ಮಹೇಂದ್ರ ಸಿಂಘಿ, ಉದಯ ರೇವಣಕರ, ಡಾ. ಬಸವರಾಜ ಅನಾಮಿ, ಸದಾನಂದ ಕಾಮತ, ಗೌತಮ ಗೊಲೇಚಾ, ವಿಶ್ವನಾಥ ಹಿರೇಗೌಡರ, ವಿಶ್ವನಾಥ ಬೆಣಕಲ್ಲ ಸೇರಿದಂತೆ ಹಲವರಿದ್ದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್‌.ಪಿ. ಸಂಶಿಮಠ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅಮೃತ ಪಾಲನಕರ ಹಾಗೂ ಪ್ರಾಂಚಿ ರೇವಣಕರ ನಿರೂಪಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ವಂದಿಸಿದರು.