ಅಧ್ಯಯನ ಪ್ರವೃತ್ತಿಯೇ ಯಶಸ್ಸಿಗೆ ಮಾರ್ಗ: ಎನ್.ಆರ್. ಹೆಗಡೆ

| Published : Sep 25 2025, 01:02 AM IST

ಅಧ್ಯಯನ ಪ್ರವೃತ್ತಿಯೇ ಯಶಸ್ಸಿಗೆ ಮಾರ್ಗ: ಎನ್.ಆರ್. ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ಎಂಟು ದಿನಗಳ ಎನ್.ಎಂ.ಎಂ.ಎಸ್. ಪರೀಕ್ಷಾ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ಎಂಟು ದಿನಗಳ ಎನ್.ಎಂ.ಎಂ.ಎಸ್. ಪರೀಕ್ಷಾ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಯಿತು.

ಡಯಟ್ ಕುಮಟಾದ ಪ್ರಾಚಾರ್ಯ ಎನ್.ಆರ್. ಹೆಗಡೆಯವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 20 ವರ್ಷಗಳಿಂದ ಸಮರ್ಪಣಾ ತರಬೇತಿ ಕೇಂದ್ರದ ಮೂಲಕ ರಜಾ ದಿನಗಳಲ್ಲಿ ವೈಯಕ್ತಿಕ ಕೆಲಸಗಳಲ್ಲಿ ತೊಡಗಿಕೊಳ್ಳುವ ಬದಲು, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಸೇರಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಕ್ರೋಢೀಕರಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದಕ್ಕೆ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಅಧ್ಯಯನ ಪ್ರವೃತ್ತಿಯೇ ಯಶಸ್ಸಿಗೆ ಮಾರ್ಗ. ಸಮಯ ಪರಿಪಾಲನೆ, ಶ್ರದ್ಧೆ, ನಿಷ್ಠೆಯಿಂದ ಪಾಠ ಪ್ರವಚನವನ್ನು ಕೇಳಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂದು ತಿಳಿಸಿದರು.

ಕಳೆದ ಸಾಲಿನಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ಉತ್ತೀರ್ಣರಾದ ಐದು ವಿದ್ಯಾರ್ಥಿಗಳನ್ನು ಸಮರ್ಪಣಾ ವೇದಿಕೆಯ ಪರವಾಗಿ ಗೌರವಿಸಲಾಯಿತು.

ಡಯಟ್ ಕುಮಟಾದ ಉಪ ಪ್ರಾಂಶುಪಾಲ, ಶಾಲೆಯ ಪೂರ್ವ ವಿದ್ಯಾರ್ಥಿ ಜಿ.ಎಸ್. ಭಟ್ಟ ಮಾತನಾಡಿ, ಈ ತರಬೇತಿಯಲ್ಲಿ ಕಲಿತ ಅಂಶಗಳನ್ನು ಸದುಪಯೋಗಪಡಿಸಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಓದುತ್ತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕೆಂದು ಹಾರೈಸಿದರು.

ಎನ್.ಎಂ.ಎಂ.ಎಸ್. ನೋಡಲ್ ಅಧಿಕಾರಿ ಡಯಟ್ ಕುಮಟಾದ ಉಪನ್ಯಾಸಕಿ ಅಂಜನಾ ನಾಯ್ಕ, ಸಮೂಹ ಸಂಪನ್ಮೂಲ ಕೇಂದ್ರ ಹೊನ್ನಾವರದ ಸಮನ್ವಯ ಅಧಿಕಾರಿಗಳಾದ ಎಂ.ಆರ್. ಭಟ್ಟ, ಶಾಲೆಯ ಮುಖ್ಯ ಅಧ್ಯಾಪಕ ಎಲ್.ಎಂ. ಹೆಗಡೆ ಮಾತನಾಡಿದರು.

ಸಮರ್ಪಣಾ ತರಬೇತಿ ಕೇಂದ್ರದ ಸಂಚಾಲಕ ಶ್ರೀಕಾಂತ್ ಹಿಟ್ನಳ್ಳಿ ಸ್ವಾಗತಿಸಿದರು. ಕವಿತಾ ನಾಯ್ಕ ವಂದಿಸಿದರು. ಸೀಮಾ ಭಟ್ಟ ಹಾಗೂ ಮುಕ್ತಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ ವಿವಿಧ ಶಾಲೆಗಳಿಂದ ಸುಮಾರು 107 ವಿದ್ಯಾರ್ಥಿಗಳು ತರಬೇತಿಯಲ್ಲಿ ನೋಂದಾಯಿಸಿ ಪಾಲ್ಗೊಂಡಿದ್ದರು.