ಅಂಬೇಡ್ಕರ್ ಅವರ ಮೌಲ್ಯ, ಜೀವನ ಸಾಧನೆಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಡಾ. ಬಿ. ಆರ್. ಅಂಬೇಡ್ಕರ್ ಅವರ ಮೌಲ್ಯ, ಜೀವನ ಸಾಧನೆಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹೇಳಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ‘ಪರಿನಿರ್ವಾಣ ದಿನ’ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶ ವಿದೇಶಗಳಲ್ಲಿ ಹಲವು ಸ್ನಾತಕೋತ್ತರ ಪದವಿ ಪಡೆದು ರಾಷ್ಟ್ರಕ್ಕೆ ಒಳ್ಳೆಯ ಸಂವಿಧಾನ ನೀಡಿದ್ದಾರೆ. ಅವರ ಜೀವನ ಸಂದೇಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.ದೇಶ ವಿದೇಶಗಳಲ್ಲಿ ಅಂಬೇಡ್ಕರ್ ಅವರ ಅಧ್ಯಯನ ಕೇಂದ್ರಗಳು ಹಾಗೂ ಸಂಶೋಧನಾ ಕೇಂದ್ರಗಳು ಇವೆ. ಇಡೀ ಪ್ರಪಂಚದಲ್ಲಿಯೇ ಅವರು ಅಜರಾಮರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಸ್ಮರಿಸಿದರು.
ದೇಶ ವಿದೇಶಗಳಲ್ಲಿಯೂ ಸಹ ಅವರ ಪ್ರತಿಮೆಯನ್ನು ಕಾಣಬಹುದಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಯನಶೀಲತೆ ಮತ್ತು ಸಾಮಾಜಿಕ ಹೋರಾಟ ರಾಷ್ಟ್ರದಲ್ಲಿ ಒಂದು ರೀತಿ ಮಹಾನ್ ಕ್ರಾಂತಿ ಎಂದು ಜಿಲ್ಲಾಧಿಕಾರಿ ಅವರು ವರ್ಣಿಸಿದರು.ಅಂಬೇಡ್ಕರ್ ಅವರ ಮೌಲ್ಯಗಳು ಹಾಗೂ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು. ಅವರು ಬರೆದಿರುವ ಸಂವಿಧಾನವನ್ನು ಸ್ಮರಿಸಿಕೊಂಡು ಅಭಿವೃದ್ಧಿಯತ್ತ ಚಿಂತನೆ ಮಾಡಬೇಕು. ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ನಡೆದುಕೊಳ್ಳಬೇಕು ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಎಚ್.ಎಲ್.ದಿವಾಕರ ಅವರು ಮಾತನಾಡಿ ಸುಮಾರು ಆರು ದಶಕಗಳ ಹೋರಾಟದ ನಂತರ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ಎಂದರು.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿ ಅವರು ನುಡಿದಂತೆ ನಡೆದಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ನಗರಸಭೆ ಸದಸ್ಯರಾದ ಎಸ್.ಸಿ.ಸತೀಶ್, ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ದೀಪಕ್ ಪೊನ್ನಪ್ಪ, ಪ್ರಮುಖರಾದ ಮೋಹನ್ ಮೌರ್ಯ, ಪ್ರೇಮ್ ಕುಮಾರ್, ರಮೇಶ್, ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.