ಶಿವಾನಂದ ಗೊಂಬಿ
ಹುಬ್ಬಳ್ಳಿ:ಇತ್ತೀಚಿಗೆ ಚಿಕ್ಕ ಮಕ್ಕಳಲ್ಲೂ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿವೆ. ಇದಕ್ಕೆ ಕಾರಣವೇನು ಎಂಬುವುದನ್ನು ಪತ್ತೆ ಹಚ್ಚಲು ಕಳೆದ ಒಂದುವರೆ ವರ್ಷದ ಹಿಂದೇ ಧಾರವಾಡ ಜಿಲ್ಲೆಯಲ್ಲಷ್ಟೇ ಅಧ್ಯಯನ ನಡೆಸಿದ್ದ ಹುಬ್ಬಳ್ಳಿಯ ಕೆಎಂಸಿಆರ್‌ಐ ಇದೀಗ ದೇಶದ ೧೩ ರಾಜ್ಯ ಹಾಗೂ ಕರ್ನಾಟಕದ 25 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿದ್ದು ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.
ಕೆಎಂಸಿಆರ್‌ಐನ ಬಹುವಿಭಾಗೀಯ ಸಂಶೋಧನಾ (ಎಂಆರ್‌ಯು) ಘಟಕ ಹಾಗೂ ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ ಜಂಟಿಯಾಗಿ ಅಧ್ಯಯನ ನಡೆಸಿದ್ದು ದೇಶದಲ್ಲೇ ಈ ರೀತಿಯ ಅಧ್ಯಯನ ಮೊದಲ ಎಂಬುದು ವಿಶೇಷ. ಮಕ್ಕಳು ಆಟೋಟಗಳಿಂದ ದೂರವಿರುವುದರಿಂದ ಕಾಣಿಸಿಕೊಳ್ಳುವ ಬೊಜ್ಜು. ಹದಿಹರೆಯ ವಯಸ್ಸಿನಲ್ಲೇ ಧೂಮಪಾನ-ಮದ್ಯಪಾನದಂತಹ ದುಶ್ಚಟಗಳು ಪ್ರಮುಖ ಕಾರಣಗಳಲ್ಲಿ ಒಂದಾಗಿವೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದ್ದು ಪರಿಹಾರವನ್ನು ತಿಳಿಸಿದೆ.347 ಮಕ್ಕಳ ಅಧ್ಯಯನ:
ರಾಜ್ಯದ 25 ಜಿಲ್ಲೆ, ದೇಶದ 13 ರಾಜ್ಯಗಳ 6ರಿಂದ 18ರ ವರ್ಷದ 347 ಲಕ್ಷಣ ರಹಿತ ನಗರ ಹಾಗೂ ಗ್ರಾಮೀಣ ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರ ಹೃದಯದ ರಕ್ತನಾಳದ ಆರೋಗ್ಯ ತಪಾಸಣೆ ನಡೆಸಿದ್ದು ಚಯಾಪಚಯ ವೈಪರೀತ್ಯ ಮತ್ತು ರಕ್ತನಾಳಗಳ ಒಳಪದರ ಹಾನಿಯ ಆರಂಭಿಕ ಲಕ್ಷಣ ಕಂಡುಬಂದಿವೆ. ಇವೆಲ್ಲವೂ ಹೃದಯಾಘಾತಕ್ಕೆ ಕಾರಣವಾಗುವ ಪ್ರಕ್ರಿಯೆಗಳಾಗಿವೆ ಎಂಬುದು ತಿಳಿದು ಬಂದಿದೆ. ಪರೀಕ್ಷೆಗೆ ಒಳಪಡಿಸಿದವರಲ್ಲಿ ಶೇ. 70ರಷ್ಟು ಮಕ್ಕಳ ಹೃದಯದ ಸಮಸ್ಯೆಗೆ ತುತ್ತಾಗುವ ಸಂಭವವಿರುವುದು ಬಯಲಾಗಿದೆ. ಬದಲಾದ ಜೀವನ ಶೈಲಿ, ಆಟೋಟಗಳಿಂದ ದೂರ ಉಳಿದಿದ್ದರಿಂದ ಬೊಜ್ಜು ಕಾಣಿಸಿಕೊಳ್ಳುತ್ತದೆ. ಆಲ್ಕೋಹಾಲ್, ಧೂಮಪಾನ, ತಂಬಾಕು, ಜಂಕ್‌ಫುಡ್ ಸೇವನೆ ಮಾಡಿದ್ದರೂ ಎಂಡೋಥೀಲಿಯಂ ಅಸಾಮಾನ್ಯ ಕ್ರಿಯೆ ತೋರಿಸಿವೆ. ಹೈಪರ್ಹೋಮೋಸಿಸ್ಟಿನೆಮಿಯಾ ಹೆಚ್ಚಿಗೆ ಹರಡಿದೆ. ಹೈ-ಸೆನ್ಸಿಟಿವಿಟಿ, ಸಿ-ರಿಯಾಕ್ಟಿವ್ ಪ್ರೊಟಿನ್ (ಎಚ್‌ಎಸ್-ಸಿಆರ್‌ಪಿ) ಹದಿಹರೆಯದವರಲ್ಲಿ ಶೇ. 28.24 ಇದ್ದು, ಇದು ಹೃದಯಾಘಾತದ ಆರಂಭಿಕ ಹಂತ ತಲುಪಿದೆ ಎಂದು ಅಧ್ಯಯನ ತಿಳಿಸಿದೆ.
8ರಿಂದ 14 ವರ್ಷದ ಮಕ್ಕಳು ಹಾಗೂ 18ರಿಂದ 30 ವರ್ಷದ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಎರಡು ಹಂತದಲ್ಲಿ ಅಧ್ಯಯನ ಮಾಡಲಾಗಿದೆ. ಒಟ್ಟು 347 ಶಾಲಾ ಮಕ್ಕಳು ಹಾಗೂ 67 ಜನ ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳನ್ನು ಸಂಶೋಧನೆಗೆ ಒಳಪಡಿಸಿದ್ದು ಶಾಲಾ ಮಕ್ಕಳಲ್ಲಿ ಶೇ. 70ಕ್ಕಿಂತ ಹೆಚ್ಚು ಮಕ್ಕಳಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಅಪಾಯಕಾರಿ ಅಂಶಗಳು ಕಂಡು ಬಂದಿವೆ.
ಕಾಲೇಜು ವಿದ್ಯಾರ್ಥಿಗಳಲ್ಲಿ ಶೇ.75ಕ್ಕಿಂತ ಹೆಚ್ಚು ಅಪಾಯಕಾರಿ ಅಂಶ ಪತ್ತೆಯಾಗಿವೆ. ದೇಹದಲ್ಲಿರುವ ಹೋಮೋಸಿಸ್ಟಿನೆಮಿಯಾ ಹಾಗೂ ಹೈ-ಸೆನ್ಸಿಟಿವಿಟಿ ಅಧ್ಯಯನದಿಂದ ಪತ್ತೆಯಾಗಿದೆ. ಇದಲ್ಲದೆ ಅಪಧಮಮಿಯ ಒಳಪದರು ಕೂಡ ಹಾಳಾಗುತ್ತಿವೆ ಎಂಬ ಬಗ್ಗೆ ಒಂದು ಅಧ್ಯಯನ ನಡೆಸಲಾಗಿದ್ದು, ಅದು ಕೂಡ ಹಾಳಾಗಿರುವುದು ಕಂಡು ಬಂದಿದೆ. ರಕ್ತದ ಒಳಪದರು ಹಾಳಾದರೆ 10-15 ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಹಾಗೂ ಸ್ಟ್ರೋಕ್ ಆಗುವ ಸಂಭವ ಹೆಚ್ಚಿರುತ್ತದೆ ಎಂಬುದು ಬೆಳಕಿಗೆ ಬಂದಿದೆ.ವರದಿ ಸಲ್ಲಿಸಲು ಸಿದ್ಧತೆ:
ಈ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ. ರಾಜ್ಯ ಸರ್ಕಾರಕ್ಕೂ ಸಲ್ಲಿಸಲಾಗುತ್ತಿದೆ. ಶೀಘ್ರದಲ್ಲಿಯೇ ಜಿಲ್ಲಾಡಳಿತವು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿ ಏನೆಲ್ಲ ಕ್ರಮಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಿದೆ.ಒಟ್ಟಿನಲ್ಲಿ ಕೆಎಂಸಿಆರ್‌ಐ ನಡೆಸಿರುವ ಅಧ್ಯಯನ ಹಲವು ಆಘಾತಕಾರಿ ಅಂಶ ಹೊರಹಾಕಿದ್ದು ಪಾಲಕರು ಎಚ್ಚೆತ್ತುಕೊಳ್ಳಬೇಕಿದೆ ಎಂಬುದಂತೂ ಸ್ಪಷ್ಟ.
ಪರಿಹಾರವೇನು* ಇದು ಜೀವನ ಶೈಲಿಯ ಮೇಲೆ ಅವಲಂಬಿತವಾಗಿದ್ದು ಆಹಾರ ಪದ್ಧತಿ ಬದಲಿಸಬೇಕಿದೆ.
* ಮಕ್ಕಳ ಚಟುವಟಿಕೆ ಕಡಿಮೆಯಾಗಿದ್ದು ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ.* ಮಕ್ಕಳ ಶಾರೀರಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವ ಜತೆಗೆ ಅವರಿಗೆ ಮೊಬೈಲ್ ಬಳಕೆ ಮಿತಗೊಳಿಸಬೇಕು
* ಮಕ್ಕಳಿಗೆ ಪೋಷಕರು ಅಂಕ ಪಡೆಯಲು ಒತ್ತಡ ಹಾಕುವುದರಿಂದ ಸರಿಯಾದ ನಿದ್ದೆ ಇಲ್ಲದೆ ಇರುವುದು ಸಹ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ತಿಳಿಸಿದೆ.ಈ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಚಿಕ್ಕಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಲು ಒಂದು ಸಂಶೋಧನೆ ಮಾಡಲಾಗಿತ್ತು. ಇದೇ ಅಧ್ಯಯನದ ಆಧಾರದ ಮೇಲೆ ದೇಶಾದ್ಯಂತ ಅಧ್ಯಯನ ಮಾಡಲಾಗಿದೆ. ಶೀಘ್ರದಲ್ಲೇ ಸರ್ಕಾರಕ್ಕೂ ವರದಿ ಸಲ್ಲಿಸಲಾಗುವುದು. ಅಧ್ಯಯನಕ್ಕೆ ಹಲವು ವೈದ್ಯಕೀಯ ಕಾಲೇಜ್‌ಗಳು ಸಾಥ್ ನೀಡಿದ್ದವು.
ಡಾ. ರಾಮ ಕೌಲಗುಡ್, ಎಂಆರ್‌ಯು ನೋಡಲ್ ಅಧಿಕಾರಿ ಕೆಎಂಸಿಆರ್‌ಐ