ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕಾನೂನು ಓದು ಮತ್ತು ವಕೀಲಿ ವೃತ್ತಿ ಹಗುರವಾಗಿ ಪರಿಗಣಿಸುವ ವೃತ್ತಿಯಲ್ಲ ಎಂದು ಮೈಸೂರಿನ ಕೌಟುಂಬಿಕ ನ್ಯಾಯಾಲಯದ 3ನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾದ ಎಸ್.ಬಿ. ಕೆಂಭಾವಿ ತಿಳಿಸಿದರು.ನಗರದ ವಿದ್ಯಾವರ್ಧಕ ಕಾನೂನು ಕಾಲೇಜು ಮೊದಲ ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಕಾಸ ಪರ್ವ- ಮೂರು ದಿನಗಳ ಅಭಿವಿನ್ಯಾಸ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಮೆಡಿಕಲ್, ಎಂಜಿನಿಯರಿಂಗ್ ಕೋರ್ಸುಗಳಿದ್ದ ಮಹತ್ವ ಈಗ ಕಾನೂನು ಕೋರ್ಸುಗಳಿಗೂ ಸಿಕ್ಕಿದೆ. ಬಿಇ, ಎಂಬಿಎ ಪದವಿ ಪಡೆದವರು ಕಾನೂನು ಪದವಿ ಕಲಿಕೆಯತ್ತ ಅಪಾರವಾದ ಆಸಕ್ತಿ ತೋರುತ್ತಿರುವುದು ನಮ್ಮ ಸಮಾಜದ ಆರೋಗ್ಯಕರ ಬೆಳವಣಿಯಾಗಿದೆ ಎಂದರು.
ಇವತ್ತು ಪ್ರತಿಯೊಬ್ಬರಿಗೂ ಕಾನೂನು ಓದಿನ ಮಹತ್ವದ ಕುರಿತು ಅರಿವಾಗುತ್ತಿದೆ. ಒಂದು ಕಾಲದಲ್ಲಿ ಅಸಡ್ಡೆಯಿಂದ ನೋಡುತ್ತಿದ್ದ ಇದೇ ಕಾನೂನು ವ್ಯಾಸಂಗವನ್ನು ಈಗ ಎಲ್ಲರೂ ಅತೀವ ಆಸಕ್ತಿಯಿಂದ ಓದುತ್ತಿರುವುದು ನಿಜಕ್ಕೂ ನಾವೆಲ್ಲ ಮೆಚ್ಚುವಂತಹ ವಿಚಾರ ಎಂದರು.ಬರಿಯ ತರಗತಿಗಳಿಗಷ್ಟೇ ಸೀಮಿತವಾಗದೆ, ಕಾನೂನು ಗ್ರಂಥಾಲಯ, ಕಾನೂನು ಶಿಕ್ಷಕರು, ಕಾನೂನು ಪುಸ್ತಕಗಳನ್ನು, ತರಗತಿಯಲ್ಲಿ ಮಾಡಿಕೊಂಡ ಟಿಪ್ಪಣಿಗಳು ನಿಮಗೆ ಕಾನೂನು ಓದು ಕಬ್ಬಿಣದ ಕಡಲೆಯಲ್ಲ ಅನ್ನುವಂತೆ ಮಾಡುತ್ತದೆ. ನ್ಯಾಯಶಾಸ್ತ್ರದಂತಹ ಕಠಿಣ ವಿಷಯಗಳು ಅರ್ಥವಾಗಬೇಕೆಂದರೆ ಸಾಲ್ಮಂಡ್ ಬರೆದ ನ್ಯಾಯಶಾಸ್ತ್ರದ ಪುಸ್ತಕವನ್ನೇ ಓದಬೇಕು ಎಂದರು.
ಇನ್ನು ಮುಂದೆ ನಿಮಗೆ ಸವಾಲಿನ ದಿನಗಳು ಎದುರಾಗಲಿವೆ. ಕೃತಕ ಬುದ್ಧಿಮತ್ತೆ ಮತ್ತು ಬೌದ್ಧಿಕ ಸ್ವತ್ತಿನ ಕಾನೂನು ವಿಷಯಗಳಿಗೆ ಜಾಗತಿಕ ಹೆಚ್ಚಿನ ಮನ್ನಣೆ ದೊರಕಲಿವೆ. ಇಂಥ ವಿಷಯಗಳನ್ನು ಕಲಿಯುವುದರತ್ತ ಕಾನೂನು ವಿದ್ಯಾರ್ಥಿಗಳು ಮತ್ತು ಯುವ ವಕೀಲರು ತೀವ್ರವಾದ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಇಲ್ಲಿ ಯಾವ ಅಡ್ಡ ದಾರಿಗಳು ನಿಮ್ಮ ಓದಿಗೆ, ನಿಮ್ಮ ಪದವಿಗೆ, ನಿಮ್ಮ ಯಶಸ್ಸಿಗೆ ದಾರಿ ತೋರಲಾರವು ಎಂದರು.ಜಗತ್ತಿನ ಬೇರೆ ಯಾವ ವೃತ್ತಿಯನ್ನು ನೊಬೆಲ್ ವೃತ್ತಿಯೆಂದು ಪರಿಣಗಣಿಸದೆ, ನ್ಯಾಯವಾದಿಗಳನ್ನು ಮಾತ್ರವೇ ಲರ್ನೆಡ್ ಅಡ್ವೊಕೇಟ್ಸ್ ಗಳೆಂದು ಕರೆಯುವುದು ವಕೀಲಿ ವೃತ್ತಿನಿರತರನ್ನು ಮಾತ್ರ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಜನ ಸಾಗರವಾಗಿ ಸೇರಿದ ನಮ್ಮ ಬಹುತೇಕ ನಾಯಕರು ಕಾನೂನು ಓದಿ ನ್ಯಾಯವಾದಿಗಳಾಗಿದ್ದವರೇ. ಗಾಂಧಿ, ಅಂಬೇಡ್ಕರ್, ಲಾಲ ಲಜಪತ್ ರಾಯ್, ಬಾಬು ರಾಜೇಂದ್ರ ಪ್ರಸಾದ್ ಈ ಎಲ್ಲಾ ಮಹನೀಯರು ಕಾನೂನು ವೃತ್ತಿಯನ್ನು ತಮ್ಮ ಬದುಕಿನ ಪುಟಗಳಲ್ಲಿ ಉಜ್ವಲಗೊಳಿಸಿದವರೇ. ಇಂಥ ವೃತ್ತಿಯನ್ನು ಕಲಿಯಲು ಕಾನೂನು ಪದವಿಯನ್ನು ಆಯ್ಕೆ ಮಾಡಿಕೊಂಡಿರುವ ತಮ್ಮೆಲ್ಲರನ್ನು ಅಭಿನಂದಿಸಲೇಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಮಾತನಾಡಿ, ಕಾನೂನು ವ್ಯಾಸಂಗಕ್ಕೆ ಈ ತಲೆಮಾರಿನ ಯುವಜನತೆ ಆಸಕ್ತಿ ತೋರುವುದು ನಿಜಕ್ಕೂ ಹೆಮ್ಮೆಪಡುವಂತದ್ದು. ಮೆಡಿಕಲ್, ಎಂಜಿನಿಯರಿಂಗ್ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದ ವಿದ್ಯಾರ್ಥಿಗಳು ಈಗ ಕಾನೂನು ಕಲಿಯಲು ಬರುತ್ತಿದ್ದಾರೆ ಎಂದರು.ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥ ಎಸ್. ಶಿವಲಿಂಗಯ್ಯ, ಪ್ರಾಂಶುಪಾಲೆ ಡಾ.ಪಿ. ದೀಪು, ಕಾರ್ಯಕ್ರಮ ಆಯೋಜಕಿ ಡಾ. ಶ್ರೀದೇವಿ ಕೃಷ್ಣ ಮೊದಲಾದವರು ಇದ್ದರು.