ಆರ್‌ಟಿಐ ಕಾಯ್ದೆ ಅಧ್ಯಯನ ಮುಖ್ಯ

| Published : Aug 25 2024, 01:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಆರ್‌ಟಿಐ ಕಾಯಿದೆ ಕುರಿತು ಅಧಿಕಾರಿಗಳು ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ ಎಂದು ಕಲಬುರ್ಗಿ ಪೀಠದ ಮಾಹಿತಿ ಹಕ್ಕು ಆಯೋಗದ ಆಯುಕ್ತ ರವೀಂದ್ರ ಗುರುನಾಥ ದಾಖಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆರ್‌ಟಿಐ ಕಾಯಿದೆ ಕುರಿತು ಅಧಿಕಾರಿಗಳು ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ ಎಂದು ಕಲಬುರ್ಗಿ ಪೀಠದ ಮಾಹಿತಿ ಹಕ್ಕು ಆಯೋಗದ ಆಯುಕ್ತ ರವೀಂದ್ರ ಗುರುನಾಥ ದಾಖಪ್ಪನವರ ಹೇಳಿದರು.ನಗರದ ಜಿಲ್ಲಾ ಪಂಚಾಯತಿ ಹಳೆಯ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು. ಬಹುತೇಕ ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳು ಕೆಲಸದ ಒತ್ತಡದಲ್ಲಿ ಮಾಹಿತಿ ಹಕ್ಕು ಕಾಯಿದೆ ಕುರಿತು ಅಧ್ಯಯನ ಮಾಡದೇ, ತಮ್ಮ ಅಧೀನ ಸಿಬ್ಬಂದಿ ಅಥವಾ ಕೇಸ್ ವರ್ಕರ್ ಹೇಳುವ ಮಾತಿನ ಆಧಾರದ ಮೇಲೆ ಅರ್ಜಿದಾರನಿಗೆ ಮಾಹಿತಿ ನೀಡುತ್ತಾರೆ. ಇದರಿಂದ ಅನಗತ್ಯ ಗೊಂದಲ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಆರ್‌ಟಿಐ ಕಾಯಿದೆ ಕುರಿತು ಅಧ್ಯಯನ ಮಾಡಿ ಅರಿತರೆ ಸಮಸ್ಯೆ ಉದ್ಬವಿಸುವದಿಲ್ಲ ಎಂದು ತಿಳಿಸಿದರು. ಮಾಹಿತಿ ಕೇಳುವ ಅರ್ಜಿದಾರನಿಗೆ, ಕಾನೂನು ಅಡಿಯಲ್ಲಿ ಬರುವ ವಿಷಯಗಳಿದ್ದಲ್ಲಿ 30 ದಿನದೊಳಗೆ ನೋಂದಾಯಿತ ಅಂಚೆ ಮೂಲಕ ಮಾಹಿತಿ ನೀಡಬೇಕು. ವ್ಯಕ್ತಿಯ ವೈಯಕ್ತಿಕ ವಿಷಯಗಳಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದರೂ ಮಾಹಿತಿ ನೀಡಲು ಬರುವುದಿಲ್ಲ. ಮಾಹಿತಿ ನೀಡುವ ಮುನ್ನ, ಯಾವ ಕಲಂ ಏನು ಹೇಳುತ್ತದೆ ಎಂಬುದನ್ನು ಸಂಪೂರ್ಣ ಅರಿತು ವಿಚಾರ ಮಾಡಿ ಕಾಯಿದೆಗೆ ಅನುಗುಣವಾಗಿ ಮಾಹಿತಿ ನೀಡುವ ಕೆಲಸ ಮಾಡಬೇಕು. ಇಲ್ಲಿ ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಎಲ್ಲ ಎಂದು ಮಾಹಿತಿ ನೀಡಿದರು.ಕಚೇರಿಯಲ್ಲಿ ಕಡತಗಳನ್ನು ಸರಿಯಾಗಿ ನಿರ್ವಹಿಸಿದ್ದಲ್ಲಿ ಅರ್ಜಿದಾರನಿಗೆ ಮಾಹಿತಿ ನೀಡುವ ಕೆಲಸ ಸುಲಭವಾಗುವದರಿಂದ ಕಡತಗಳ ನಿರ್ವಹಣೆಗೆ ಆಧ್ಯತೆ ನೀಡಬೇಕು. ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಒಗ್ಗಟ್ಟು ಇಲ್ಲದೇ ಇದ್ದಾಗ ಮಾಹಿತಿ ಕೇಳುವ ಅರ್ಜಿದಾರರ ಸಂಖ್ಯೆಯು ಹೆಚ್ಚಾಗಿ ಸಮಸ್ಯೆಗಳು ಉದ್ಬವಿಸುವ ಸನ್ನಿವೇಶ ಉಂಟಾಗಬಹುದು. ಕಚೇರಿ ಕೆಲಸಗಳಲ್ಲಿ ಉದಾಸೀನತೆ ತೋರದೆ ಸರಿಯಾಗಿ ಸಕರಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಸೇರಿ ಇತರೆ ಅಧಿಕಾರಿಗಳು ಇದ್ದರು.