ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಕಚೇರಿಗೆ ಸಮಸ್ಯೆ ಹೇಳಿಕೊಂಡು ಬರುವ ಜನರನ್ನು ಏಕೆ ದಿನವೂ ಸಾಯಿಸ್ತೀರ? ಒಂದೇ ದಿನ ಸಾಯ್ಸಿ ಇಲ್ಲವೇ ಬದುಕಿಸಿ ಎಂದು ಕರ್ನಾಟಕ ಉಪಲೋಕಾಯುಕ್ತ ಬಿ.ವೀರಪ್ಪ ಹೊಸಕೋಟೆ ತಹಸೀಲ್ದಾರ್ ಸೋಮಶೇಖರ್ ಅವರಿಗೆ ತರಾಟೆಗೆ ತೆಗೆದುಕೊಂಡರು.ನಗರದ ಖಾಸಗಿ ಸಭಾಭವನದಲ್ಲಿ ನಡೆದ ಹೊಸಕೋಟೆ ತಾಲೂಕಿನ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ಪ್ರಕರಣಗಳ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಜನರು ತಮ್ಮ ಕೆಲಸ ಕಾರ್ಯ ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಲ್ಲಿ ಸಾಯ್ತಿದ್ದಾರೆ, ಸಂವಿಧಾನದ ನಾಲ್ಕು ಅಂಗಗಳು ದುರ್ಬಲವಾಗಿವೆ. ಕೇಂದ್ರದಲ್ಲಿ ಲೋಕಪಾಲ್ ಇದೆ, ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಭವ್ಯ ಇತಿಹಾಸವಿದೆ. ಅಧಿಕಾರದಲ್ಲಿದ್ದ ಸಚಿವರನ್ನು ಮತ್ತು ಮುಖ್ಯಮಂತ್ರಿಯನ್ನು ಸಹ ಜೈಲಿಗೆ ಕಳುಹಿಸಿರುವ ಉದಾಹರಣೆ ಇದೆ. ಸರ್ಕಾರಿ ಅಧಿಕಾರಿಗಳು ನಿಷ್ಠೆಯಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಕಾರ್ಯನಿರ್ವಹಿಸಬೇಕು. ನಾನು ಒಳ್ಳೆಯವರಿಗೆ ಒಳ್ಳೆಯ ಕೆಲಸಕ್ಕೆ ತಲೆ ಬಾಗುತ್ತೇನೆ, ಭ್ರಷ್ಟಾಚಾರಿಗಳಿಗೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುವವರೆಗೆ ಬಿಡುವುದಿಲ್ಲ ಎಂದು ಅವ್ಯವಸ್ಥೆ ವಿರುದ್ಧ ಕಿಡಿಕಾರಿದರು.ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 25 ಸಾವಿರ ಪ್ರಕರಣಗಳು ಬಾಕಿಯಿದ್ದು, ವಿಲೇವಾರಿ ಮಾಡಲು ನಾವು ಬೆಳಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡುತ್ತಿದ್ದೇವೆ. ನನ್ನ ದೇಹಕ್ಕೆ ವಯಸ್ಸಾಗಿದೆ, ಆದರೆ ನನ್ನ ದೃಢ ಸಂಕಲ್ಪಕ್ಕೆ ವಯಸ್ಸಾಗಿಲ್ಲ. ನಾವು ಲೋಕಾಯುಕ್ತ ಸಂಸ್ಥೆಯ ತಾಯಿ ಸ್ಥಾನದಲ್ಲಿದ್ದು, ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ನೀಡಲು ಸದಾ ಸಿದ್ಧರಿದ್ದೇವೆ. ಭವಿಷ್ಯದ ಜನಾಂಗಕ್ಕೆ ದಾರಿ ದೀಪದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಯುವಕರು ಮೊಬೈಲ್ ಗೀಳನ್ನು ಕಡಿಮೆ ಮಾಡಿ, ದೇಶ ಪ್ರೇಮ ಅಳವಡಿಸಿಕೊಂಡು, ದೇಶದ ಅಭಿವೃದ್ಧಿಗೆ ಎಚ್ಚೆತ್ತುಕೊಳ್ಳಬೇಕು. ಒಂದು ದೇಶ ಸಮೃದ್ಧಿಯಾಗಿ ಬೆಳೆಯಲು ಸಮಾಜದ ತಳಪಾಯ ಸರಿಯಾಗಿರಬೇಕುಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಪಂ ಸಿಇಒ ಡಾ.ಕೆ.ಎನ್. ಅನುರಾಧ, ಎಎಸ್ಪಿ ನಾಗರಾಜ್, ಲೋಕಾಯುಕ್ತ ವಿಚಾರಣೆ-1 ಉಪ ನಿಬಂಧಕರು ಅರವಿಂದ ಎನ್.ವಿ., ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲ್ ಭೀಮಸೇನ ಬಗಾಡಿ, ಲೋಕಾಯುಕ್ತ ಡಿವೈಎಸ್ಪಿ ಗಿರೀಶ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ದೂರುದಾರರು ಉಪಸ್ಥಿತರಿದ್ದರು.