ಸಾರಾಂಶ
ಕೊಪ್ಪಳ: ಚರಂಡಿ ನೀರು ಹಳ್ಳ ಸೇರುತ್ತಿರುವುದು, ಆಸ್ಪತ್ರೆಯಲ್ಲಿ ಅವಧಿ ಮುಗಿದ ಜೌಷಧಿ, ಹರಿದ ದಿಂಬು, ಗಾದಿ, ಚಿಕಿತ್ಸೆ ಸಿಗದೇ ಪರದಾಡುತ್ತಿರುವ ರೋಗಿಗಳು, ಕೊಪ್ಪಳ ನಗರಸಭೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಸರ್ಕಾರಕ್ಕೆ ತುಂಬಬೇಕಾದ ಜಿಎಸ್‌ಟಿ ಎತ್ತಿ ಹಾಕಿರುವುದು, ಅಷ್ಟೆ ಅಲ್ಲ, ನಿತ್ಯ ಎಣ್ಣೆ ಹೊಡೆಯಲು (ಮದ್ಯಪಾನ ಮಾಡಲು) ಮದ್ಯದಂಗಡಿಗೆ ಪೋನ್ ಪೇ ಮಾಡುತ್ತಿದ್ದ ನಗರಸಭೆ ನೌಕರ.
ಇವು ಕೊಪ್ಪಳಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರಿಗೆ ಮೊದಲ ದಿನವಾದ ಬುಧವಾರ ಎದುರಾದ ಅವ್ಯವಸ್ಥೆ ಮತ್ತು ಭ್ರಷ್ಟಾಚಾರದ ಝಲಕಗಳು.ಹೌದು, ಬೆಳಗ್ಗೆ ಹಂಪಿ ಎಕ್ಸ್ ಪ್ರೆಸ್ ರೈಲು ಮೂಲಕ ಆಗಮಿಸಿದ ಉಪಲೋಕಾಯುಕ್ತ ಬಿ.ವೀರಪ್ಪ, ಕೊಪ್ಪಳಕ್ಕೆ ಆಗಮಿಸುತ್ತಿದ್ದಂತೆ ಇಡೀ ನಗರದ ಚರಂಡಿ ನೀರು ಹರಿದು ಹಳ್ಳ ಸೇರುತ್ತಿರುವುದನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿದರು.
ರೈಲ್ವೆಯಿಂದ ಇಳಿದು ಪ್ರವಾಸಿ ಮಂದಿರಕ್ಕೆ ತೆರಳುವ ಮುನ್ನ ದಾರಿಯಲ್ಲಿಯೇ ಇದ್ದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದರು. ಅಲ್ಲಿಯ ಅವ್ಯವಸ್ಥೆ ಮತ್ತು ಬಂದಾಗಿದ್ದ ಶೌಚಾಲಯ ಕಂಡು ಸಾರಿಗೆ ಸಿಬ್ಬಂದಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಸ್ ನಿಲ್ದಾಣದಲ್ಲಿದ್ದ ಅಂಗಡಿಗಳಲ್ಲಿ ಅವಧಿ ಮುಗಿದ ದಿನಸಿ ಪಾಕೇಟ್ ಮತ್ತು ಪ್ಲಾಸ್ಟಿಕ್ ನಲ್ಲಿ ನಾನಾ ಪದಾರ್ಥ ಖರೀದಿಸಿದ್ದನ್ನು ನೋಡಿ ತೀವ್ರ ತರಾಟೆಗೆ ತಗೆದುಕೊಂಡರು. ಬಸ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿಗಳಿಂದ ಸಮಸ್ಯೆ ಆಲಿಸಿದರು. ಅಲ್ಲಿಂದ ವಿದ್ಯಾರ್ಥಿಯೋರ್ವನನ್ನು ಮುಂದೆ ಏನಾಗಬೇಕೆಂದಿದ್ದಿಯಾ ಎಂದು ಪ್ರಶ್ನೆ ಮಾಡಿದಾಗ ಬಾಲಕ ನಾನು ಸೈನಿಕನಾಗುತ್ತೇನೆ ಎಂದಾಗ ತಬ್ಬಿಕೊಂಡು, ಮುದ್ದಾಡಿದರು.ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಹರಿದ ದಿಂಬು, ಅವಧಿ ಮುಗಿದ ಔಷಧಿ, ಚಿಕಿತ್ಸೆಗಾಗಿ ಪರಿತಪಿಸುತ್ತಿದ್ದ ರೋಗಿಗಳು, ಕುಡಿಯಲು ನೀರು ಸಹ ಇಲ್ಲದಿರುವುದನ್ನು ಕಂಡು ವೈದ್ಯರು ಮತ್ತು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕುಡಿದ ಮತ್ತಿನಲ್ಲಿ ಫೈರಿಂಗ್ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದವನಿಗೆ ಬುದ್ದಿವಾದ ಹೇಳಿದರಲ್ಲದೆ ಪತಿ ಬಿಟ್ಟು ಹೋಗಿರುವ ಪತ್ನಿಯನ್ನು ಕಂಡು ಮಮ್ಮಲ ಮರುಗಿದರು. ಅಷ್ಟೇ ಅಲ್ಲ, ಅವಳಿಗೆ ಗೃಹಲಕ್ಷ್ಮಿಯಾದರೂ ದೊರೆಯುವಂತೆ ಮಾಡಿ ಎಂದು ಸೂಚಿಸಿದರು.ನಗರಸಭೆ ಅಧಿಕಾರಿಗಳ ವಿರುದ್ಧ ದೂರು ದಾಖಲು: ಬಳಿಕ ಕೊಪ್ಪಳ ನಗರಸಭೆಗೆ ಭೇಟಿ ನೀಡಿ ನಗರಸಭೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಗರದಲ್ಲಿ ಬೀದಿ ದೀಪ ಇಲ್ಲ, ಕಸದ ರಾಶಿ ಬಿದ್ದಿವೆ. ಅತಿಕ್ರಮಣ ತೆರವು ಮಾಡಿಲ್ಲ, ಫುಟ್‌ಪಾತ್ ತೆರವು ಮಾಡದೇ ಇರುವ ಕುರಿತು ಸಾಲು ಸಾಲು ಪ್ರಶ್ನೆ ಕೇಳಿ ತರಾಟೆಗೆ ತೆಗೆದುಕೊಂಡರು.
ಫಾರ್ಮ್ ನಂ. 3 ವಿತರಣೆ, ಎ.ಖಾತಾ, ಬಿ ಖಾತಾ ವಿತರಣೆಯ ಕುರಿತು ವಿವರಣೆ ಕೇಳಿದಾಗ ತಡಬಡಿಸಿದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಸೂಚಿಸಿದರು.ನಗರಸಭೆಯಲ್ಲಿನ ಲೆಕ್ಕಪತ್ರ, ಅಂಗಡಿಗಳ ಪರವಾನಗಿ ಶುಲ್ಕ ಹೀಗೆ ಹಲವು ರೀತಿ ಪ್ರಶ್ನೆ ಮಾಡಿದರು. ಎಇ ಸೋಮಲಿಂಗಪ್ಪ ಅವರನ್ನು ಕೆಲಕಾಲ ವಿಚಾರಣೆ ನಡೆಸಿದರಲ್ಲದೇ ಅವರ ವಿರುದ್ಧ ದೂರು ದಾಖಲಾಗಿರುವ ಮಾಹಿತಿ ಪಡೆದರು. ಇವರ ಕುರಿತು ಉಪಲೋಕಾಯುಕ್ತ ಕಚೇರಿಯಲ್ಲಿಯೂ ಒಂದು ದೂರು ದಾಖಲಿಸಿಕೊಳ್ಳುವಂತೆ ಸೂಚಿಸಿದರು.
ಹಣ ದುರ್ಬಳಕೆ ಮತ್ತು ಕಾಮಗಾರಿ ಮಾಡದೆ ಬಿಲ್ ಎತ್ತಿರುವ ಮಾಹಿತಿ ಸೇರಿದಂತೆ ಅನೇಕ ರೀತಿಯ ಪ್ರಶ್ನೆ ಮಾಡಿದ್ದಲ್ಲದೆ ಜಿಎಸ್ ಟಿಯನ್ನು ಸರ್ಕಾರಕ್ಕೆ ಪಾವತಿ ಮಾಡಿರುವ ಮಾಹಿತಿ ಪ್ರಶ್ನೆ ಮಾಡಿದರು. ಅಕೌಂಟೆಂಟ್ ಖುದ್ದು ಜಿಎಸ್ ಟಿ ಮತ್ತು ಸೆಸ್ ಸರ್ಕಾರಕ್ಕೆ ಪಾವತಿ ಮಾಡದೆ ಬಳಕೆ ಮಾಡಿಕೊಂಡಿರುವುದನ್ನು ಕಂಡು ಲೋಕಾಯುಕ್ತ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದರು.ನಗರಸಭೆಯ ಎಲ್ಲ ಅಕ್ರಮದ ಕುರಿತು ಪ್ರತ್ಯೇಕ ದೂರು ದಾಖಲಿಸಿಕೊಳ್ಳುವಂತೆ ಸ್ಥಳದಲ್ಲಿಯೇ ಇದ್ದ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದರು.
ತಹಸೀಲ್ದಾರ ಕಚೇರಿ ಮತ್ತು ಉಪನೋಂದಣಾಧಿಕಾರಿ ಕಚೇರಿಗೂ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿಯನ್ನು ವಿಚಾರಣೆ ಮಾಡಿದರು. ಅವರ ಪೊನ್ ಪೇ ಮಾಹಿತಿ ಪಡೆದರು.ಅದಾದ ನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಭೇಟಿ ನೀಡಿ, ಅಲ್ಲಿಯ ಅಕ್ರಮದ ಕುರಿತು ಸ್ವಯಂ ದೂರು ದಾಖಲಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಜಿಪಂ ಸಿಇಓ ವರ್ಣೀತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಎಸ್ಪಿ ಡಾ.ರಾಮ ಎಲ್. ಅರಸಿದ್ದಿ, ಎಸಿ. ಕ್ಯಾ.ಮಹೇಶ ಮಾಲಗಿತ್ತಿ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.
ನಿತ್ಯ ಡೈಮಂಡ್ ಲಿಕ್ಕರ್ ಗೆ ಹಣ: ಕೊಪ್ಪಳ ನಗರಸಭೆ ಸಿಬ್ಬಂದಿಯೋರ್ವರು ನಿತ್ಯ ಸಾರಾಯಿ ಸೇವಿಸುತ್ತಿರುವುದು ಉಪಲೋಕಾಯುಕ್ತ ಬಿ.ವೀರಪ್ಪ ಎದುರೇ ಅನಾವರಣವಾಗಿದೆ.ಕೊಪ್ಪಳ ನಗರಸಭೆಯಲ್ಲಿನ ಸಿಬ್ಬಂದಿಗಳ ವಿಚಾರಣೆ ಮಾಡುತ್ತಿದ್ದ ವೇಳೆ ಮೊಬೈಲ್ ಪಡೆದು ಅವರ ಪೋನೇ ಪೇ ವ್ಯವಹಾರ ಪರಿಶೀಲನೆ ಮಾಡಲಾಯಿತು. ಅದರಲ್ಲಿ ಓರ್ವ ಸಿಬ್ಬಂದಿ ಪೋನ್ ಪೇ ಇತಿಹಾಸ ನೋಡಿದಾಗ ನಿತ್ಯವೂ ಡೈಮಂಡ್ ಲಿಕ್ಕರ್ ಖಾತೆಗೆ ₹150 ಪೇ ಆಗಿರುವ ಮಾಹಿತಿ ಗೊತ್ತಾಯಿತು. ಇದನ್ನು ನೋಡಿದ ಉಪಲೋಕಾಯುಕ್ತರು, ನಿತ್ಯ ಅಷ್ಟೇ ಪ್ರಮಾಣದಲ್ಲಿ ಹೊಡಿತೀಯಾ ಎಂದು ಛೇಡಿಸಿದರು.
;Resize=(128,128))
;Resize=(128,128))